ಲೋಕಸಭಾ ಹೊತ್ತಲ್ಲೇ ಕಾಂಗ್ರೆಸ್ಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕ
ಬೆಂಗಳೂರು : ಲೋಕಸಭಾ ಚುನಾವಣೆ ಹೊತ್ತಲ್ಲಿ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಹೊಸದಾಗಿ ಐವರನ್ನು ಎಐಸಿಸಿ ನೇಮಿಸಿದೆ. ನಾಲ್ವರು ಕಾರ್ಯಾಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್ ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಐವರು ನೂತನ ಕಾರ್ಯಾಧ್ಯಕ್ಷರ ನೇಮಕ ಮಾಡಿರುವ ಕಾಂಗ್ರೆಸ್, ಸಮುದಾಯವಾರು ಪ್ರಾತಿನಿಧ್ಯ ನೀಡಿದೆ. ಮುಸ್ಲಿಂ, ಒಕ್ಕಲಿಗ, ವೀರಶೈವ ಲಿಂಗಾಯತ, ಬಂಟ್ಸ್ ಹಾಗೂ ದಲಿತ ಬಲಗೈ ಸಮುದಾಯದ ನಾಯಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಶಾಸಕ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಶಾಸಕ ವಿನಯ್ ಕುಲಕರ್ಣಿ, ಮುಖಂಡರಾದ ಮಂಜುನಾಥ ಭಂಡಾರಿ ಹಾಗೂ ವಸಂತ ಕುಮಾರ್ ಅವರನ್ನು ನೂತನ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಸಂಘಟನಾತ್ಮಕ ಬದಲಾವಣೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂಘಟನಾತ್ಮಕ ಬದಲಾವಣೆ ಮಾಡಲು ಕಾಂಗ್ರೆಸ್ ಈ ತಂತ್ರವನ್ನು ಮಾಡಿದೆ. ಹೀಗಾಗಿ ಸಮುದಾಯವಾರು ಪ್ರಾತಿನಿಧ್ಯವನ್ನು ನೀಡಲಾಗಿದೆ. ಜತೆಗೆ ಸಚಿವ ಸ್ಥಾನದಿಂದ ವಂಚಿತರಾದವರು ಹಾಗೂ ಲೋಕಸಭೆ ಟಿಕೆಟ್ ಮಿಸ್ ಆದವರಿಗೆ ಸ್ಥಾನ ಕಲ್ಪಿಸಲಾಗಿದೆ. ಆ ಮೂಲಕ ಸಮಾಧಾನ ಪಡಿಸುವ ಯತ್ನವೂ ನಡೆದಿದೆ.
ಯಾವ ನಾಯಕರು ಯಾವ ಸಮುದಾಯದವರು?
ತನ್ವೀರ್ ಸೇಠ್ – ಮುಸ್ಲಿಂ
ಜಿ.ಸಿ. ಚಂದ್ರಶೇಖರ್- ಒಕ್ಕಲಿಗ
ವಿನಯ್ ಕುಲಕರ್ಣಿ- ವೀರಶೈವ ಲಿಂಗಾಯತ
ಮಂಜುನಾಥ ಭಂಡಾರಿ – ಬಂಟ್ಸ್( ಒಬಿಸಿ)
ವಸಂತ ಕುಮಾರ್- ದಲಿತ ಬಲಗೈ
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ
ಇನ್ನು ಇದೇ ವೇಳೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನು ಸಹ ನೇಮಿಸಿ ಆದೇಶವನ್ನು ಹೊರಡಿಸಲಾಗಿದೆ. ಅಧ್ಯಕ್ಷರನ್ನಾಗಿ ವಿನಯ್ ಕುಮಾರ್ ಸೊರಕೆ ಅವರನ್ನು ಆಯ್ಕೆ ಮಾಡಲಾಗಿದ್ದರೆ, ಸಹ ಅಧ್ಯಕ್ಷರಾಗಿ ಎಲ್. ಹನುಮಂತಯ್ಯ ಹಾಗೂ ಉಪಾಧ್ಯಕ್ಷರಾಗಿ ರಿಜ್ವಾನ್ ಅರ್ಷದ್ ಅವರನ್ನು ನೇಮಿಸಿ ಆದೇಶವನ್ನು ಹೊರಡಿಸಲಾಗಿದೆ.