ಹುಬ್ಬಳ್ಳಿ : ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಹಿಡಿಯಲು ಹುಬ್ಬಳ್ಳಿ ಪೊಲೀಸರು ಅನಿವಾರ್ಯವಾಗಿ ಆತನ ಮೇಲೆ ಗುಂಡು ಹಾರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ.

ಫರ್ಹಾನ್ ಶೇಖ್ ಅಂತಾರಾಜ್ಯ ಕಳ್ಳ. ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಜೊತೆಗೆ ಕಲಬುರ್ಗಿ, ಹೈದರಾಬಾದ್, ಅಹಮದ್ ನಗರ, ಸೂರತ್, ಮುಂಬೈ ಮುಂತಾದೆಡೆ ಈತನ ಮೇಲೆ ಕೊಲೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಆತನನ್ನು ಹುಡುಕಲು ಪೊಲೀಸರು ಶೋಧ ನಡೆಸಿದ್ದರು.

ಕೇಶ್ವಾಪುರದ ಪೊಲೀಸರು ಜ್ಯುವೆಲರಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ರಾತ್ರಿ ಆತನನ್ನು ಬಂಧಿಸಿದ್ದರು. ಶುಕ್ರವಾರ ಆತನ ಇದರ ಸಹಚರರನ್ನು ಬಂಧಿಸಲು ಮುಂದಾಗಿದ್ದಾರೆ. ಗಾಮನಗಟ್ಟಿ ರಸ್ತೆ ಬಳಿ ತಾರಿಹಾಳ ಕ್ರಾಸ್ ನಲ್ಲಿ ಆರೋಪಿ ಫರ್ಹಾನ್ ಶೇಕ್ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಪ್ರಯತ್ನಿಸಿದ್ದಾನೆ. ಆಗ ಪೊಲೀಸರು ಅನಿವಾರ್ಯವಾಗಿ ತಮ್ಮ ರಕ್ಷಣೆಗೆ ಮುಂದಾಗಿದ್ದು ಕೇಶ್ವಾಪುರ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಮಾಡಗ್ಯಾಳ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರು. ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಆತನ ಕಾಲಿಗೆ ಗುಂಡು ತಗಲಿದೆ. ತಕ್ಷಣ ಗಾಯಗೊಂಡ ಅವನನ್ನು ಹಾಗೂ ಗಾಯಗೊಂಡ ಇತರ ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.