ರಾಂಚಿ : ವಿಚಿತ್ರ ಘಟನೆಯೊಂದರಲ್ಲಿ ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಜೀವಂತ ಕೋಳಿಮರಿಯನ್ನು ನುಂಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಆದರೆ ವಿಚಿತ್ರವೆಂದರೆ ಆತ ನುಂಗಿದ ಕೋಳಿಮರಿ ದೇಹದೊಳಗೆ ಜೀವಂತವಾಗಿ ಪತ್ತೆಯಾಗಿದೆ…!

ಗ್ರಾಮಸ್ಥರ ಪ್ರಕಾರ ಇದು ನಿಗೂಢ ಕ್ಷುದ್ರ ಆಚರಣೆ ಭಾಗವಾಗಿ ನಡೆದ ವಿದ್ಯಮಾನವಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದ ಚಿಂಡ್ಕಾಲೋ ಗ್ರಾಮದ ಆನಂದ ಯಾದವ ಎಂಬ 35 ವರ್ಷದ ವ್ಯಕ್ತಿ, ಸ್ನಾನ ಮುಗಿಸಿ ಬಂದ ಸ್ವಲ್ಪ ಸಮಯದ ನಂತರ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಅವರ ಮನೆಯವರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರ ಗಂಟಲಿನ ಒಳಗೆ ಜೀವಂತ ಕೋಳಿಮರಿಯನ್ನು ಕಂಡು ವೈದ್ಯರೇ ದಿಗ್ಭ್ರಮೆಗೊಂಡರು.

 

ಅಂಬಿಕಾಪುರದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಕರೆತಂದಾಗ ಆನಂದ ಯಾದವ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ಕುಟುಂಬದ ಪ್ರಕಾರ, ಅವರು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವರು ತಲೆಸುತ್ತು ಬಂದು ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯದ ನಂತರ ವೈದ್ಯರು ಕೋಳಿಮರಿ ಗಂಟಲಿನಲ್ಲಿ ಸಿಲುಕಿಕೊಂಡಿದನ್ನು ಪತ್ತೆ ಮಾಡಿದರು. ಉಸಿರಾಟ ಕ್ರಿಯೆಗೆ ತೊಂದರೆ ಉಂಟಾಗಿದೆ, ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಕೋಳಿಮರಿ ಗಂಟಲಿನ ಮೂಲಕ ಉಸಿರು ಒಳಹೋಗುವುದನ್ನು ತಡೆದಿದೆ. ಇದು ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಗಂಟಲಿನೊಳಗಿತ್ತು ಸುಮಾರು 20 ಸೆಂ.ಮೀ ಉದ್ದದ ಜೀವಂತ ಕೋಳಿಮರಿ…!
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ವೈದ್ಯರಿಗೆ ಆನಂದ ಯಾದವ ಅವರ ಗಂಟಲಿನ ಒಳಗೆ ಸುಮಾರು 20 ಸೆಂ.ಮೀ ಉದ್ದದ ಜೀವಂತ ಕೋಳಿ ಮರಿ ಕಂಡುಬಂದಿದೆ. ಯಾದವ್ ಅವರ ಗಂಟಲನ್ನು ಸೀಳಿದಾಗ ಅಲ್ಲಿ ಕೋಳಿಮರಿ ಕಂಡುಬಂತು. ಅದು ಜೀವಂತವಾಗಿತ್ತು. ಶವಪರೀಕ್ಷೆ ನಡೆಸಿದ ಡಾ. ಸಂತು ಬ್ಯಾಗ್ ಪ್ರಕಾರ, ಕೋಳಿಮರಿ ಗಂಟಲಿನಲ್ಲಿ ಗಾಳಿ ಮತ್ತು ಆಹಾರ ಮಾರ್ಗಗಳೆರಡನ್ನೂ ಬ್ಲಾಕ್‌ ಮಾಡಿದ್ದು, ಉಸಿರು ಕಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ನೋಡಿದ್ದೇನೆ ಎಂದು ಹೇಳಿದ್ದಾರೆ.

ಗ್ರಾಮಸ್ಥರು ಆನಂದ ಯಾದವ್ ಅವರ ಅಸಹಜ ಸಾವಿಗೆ ನಿಗೂಢ ಆಚರಣೆಗಳು ಕಾರಣ ಎಂದು ಹೇಳಿದ್ದಾರೆ. ಕೆಲವು ನಿವಾಸಿಗಳು ಅವರು ‘ತಾಂತ್ರಿಕನʼ ಸಂಪರ್ಕದಲ್ಲಿದ್ದರು ಮತ್ತು ಬಂಜೆತನದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ತಂದೆಯಾಗುವ ಆಸೆಯನ್ನು ಈಡೇರಿಸಿಕೊಳ್ಳಲು ತಾಂತ್ರಿಕ ಆಚರಣೆಯ ಅಂಗವಾಗಿ ಕೋಳಿ ಮರಿಯನ್ನು ನುಂಗಿರಬಹುದು ಎಂದು ಗ್ರಾಮಸ್ಥರು ನಂಬಿದ್ದಾರೆ. ಆದಾಗ್ಯೂ, ಇವು ಕೇವಲ ಊಹಾಪೋಹವಾಗಿದೆಯೇ ಹೊರತು ಇದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಯಾದವ್ ಅವರ ಈ ವಿಲಕ್ಷಣ ಕೃತ್ಯದ ಹಿಂದಿನ ನಿಖರ ಕಾರಣವನ್ನು ಇನ್ನೂ ಕಂಡುಹಿಡಿಯಲು ಆಗಿಲ್ಲ.
ಘಟನೆಗೆ ನಿಖರ ಕಾರಣ ತಿಳಿಯಲು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದರೂ ಹೆಚ್ಚಿನ ವಿಷಯ ಗೊತ್ತಾಗಿಲ್ಲ. ಬಹಿರಂಗವಾಗಿಲ್ಲ. ಹೀಗಾಗಿ ಇಂತಹ ದಿಗ್ಭ್ರಮೆಗೊಳಿಸುವ ಕೋಳಿಮರಿಯನ್ನು ಜೀವಂತವಾಗಿ ನುಂಗುವ ನಿರ್ಧಾರಕ್ಕೆ ತಾಂತ್ರಿಕರಿಂದ ಯಾದವ್ ಪ್ರಭಾವಿತರಾಗಿರಬಹುದು ಎಂದು ಪೊಲೀಸರು ಸಹ ಶಂಕಿಸಿದ್ದಾರೆ.