ಬೆಳಗಾವಿ : ಖಾನಾಪುರ ತಾಲೂಕಿನ ನೀಲವಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೋಲಿ ಎಂಬಲ್ಲಿ ಕಂಬದ ಮೇಲಿನ ತಂತಿಗಳನ್ನು ಜೋಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಕಿತ್ತೂರ ತಾಲೂಕಿನ ಕಾದ್ರೋಳಿ ನಿವಾಸಿ, ಗುತ್ತಿಗೆ ಕಾರ್ಮಿಕ ಮಂಜುನಾಥ ಬಸಪ್ಪ ಕುರುಬರ (ವಯಸ್ಸು 19) ಮೃತಪಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಕಣಕುಂಬಿ, ಜಾಂಬೋಟಿ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಈ ಭಾಗದಲ್ಲಿ ಹಲವು ಕಂಬಗಳು ನೆಲಕ್ಕುರುಳಿವೆ. ಇದರಿಂದ ಈ ಭಾಗದ ಗ್ರಾಮಗಳಲ್ಲಿ ಐದು ದಿನಗಳಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ನಿಲವಾಡೆ ಗ್ರಾಮದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದರಿಂದ ಕಳೆದ ಎರಡು ದಿನಗಳಿಂದ ಈ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಆರಂಭವಾಗಿದೆ. ಭಾನುವಾರ ನಿಲವಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೋಲಿ, ಕಂಸೂಲಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭಗೊಂಡಿತು.

ವಿದ್ಯುತ್ ತಂತಿಗಳನ್ನು ಜೋಡಿಸುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದಾಗ ವಿದ್ಯುತ್ ಕಂಬ ಮೇಲೆ ಕೆಲಸ ಮಾಡುತಿದ್ದ ಮಂಜುನಾಥ ಕುರುಬರ ವಿದ್ಯುತ್ ಸ್ಪರ್ಶಿಸಿ ಕಂಬದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 26ರ ಭಾನುವಾರ ರಾತ್ರಿ 11.40ರ ನಡುವೆ ಮೃತಪಟ್ಟಿದ್ದಾರೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ರಾಘವ ಮತ್ತು ಮೇಲ್ವಿಚಾರಕ ಗೋಪಿ ರೆಡ್ಡಿ ಅವರು ಅಜಾಗರೂಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಂಜುನಾಥ ಅವರ ತಂದೆ ದೂರು ದಾಖಲಿಸಿದ್ದಾರೆ. ಆದ್ದರಿಂದ ಗುತ್ತಿಗೆದಾರ ಹಾಗೂ ಮೇಲ್ವಿಚಾರಕರ ವಿರುದ್ಧ ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಖಾನಾಪುರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸೋಮವಾರ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.