ಬೆಳಗಾವಿ :
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡುವ ಸಂಪ್ರದಾಯ ನಿಲ್ಲಿಸಬೇಕು. ಇಲ್ಲವಾದರೆ ಸರಕಾರದ ವಿರುದ್ಧವೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲು ಮಾಡಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.

 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಯಾವ ನಿಯಮಗಳಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಲ್ಲೂ ದಾಖಲೆ ಇಲ್ಲ. ಆದರೆ ಈಗ ಮುಖ್ಯಮಂತ್ರಿಗಳು ಸೂಚಿಸಿದವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡುತ್ತೇವೆ ಎಂದು ಶಿಷ್ಟಾಚಾರ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಿದ್ದಾರೆ. ನಿಯಮಾವಳಿಯಲ್ಲಿ ಅವಕಾಶ ಇರದಿದ್ದರೆ ಯಾವ ರೀತಿಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ನಿಗಮ ಮಂಡಳಿಗಳಿಗೆ ಬರುವ ಕೆಲಸಗಳಿಗೆ ಪ್ರತ್ಯೇಕ ಇಲಾಖೆಗಳಿವೆ. ಐಎಎಸ್ ಅಧಿಕಾರಿಗಳು ಅವುಗಳಿಗೆ ಪ್ರಧಾನ ಕಾರ್ಯದರ್ಶಿಗಳಾಗಿರುತ್ತಾರೆ. ಆಯಾ ಇಲಾಖೆಗೆ ಸಚಿವರು ಸಹಾ ಇದ್ದಾರೆ. ಆದರೆ, ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಸರಿಯಲ್ಲ. ಶಾಸಕರ ಸಂಖ್ಯಾಬಲಕ್ಕೆ ಅನುಗುಣವಾಗಿ ಜನಪ್ರತಿನಿಧಿಗಳಿಗೆ ಸಚಿವರಾಗಲು ಸಂವಿಧಾನದ ತಿದ್ದುಪಡಿಯಲ್ಲಿ ಅವಕಾಶವಿದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಜನಪ್ರತಿನಿಧಿಗಳಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಲು ಅವಕಾಶವಿಲ್ಲ ಎಂದು ಅವರು ಹೇಳಿದರು.