ಬೆಳಗಾವಿ :
ಜಗಜ್ಯೋತಿ ವಿಶ್ವಗುರು ಬಸವಣ್ಣರವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿರುವುದನ್ನು ಮಾರ್ಪಡಿಸಿ “ನಾಡಿನ ಆರಾಧ್ಯ ದೈವ ಬಸವಣ್ಣ” ಎಂದು ಅಧೀಕೃತವಾಗಿ ಮರು ಘೋಷಣೆ ಮಾಡುವ ಸಲುವಾಗಿ ಘನವೆತ್ತ ಉಚ್ಛನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ, ಈ ಕುರಿತು ಸೂಕ್ತ ಕ್ರಮ ಕೈಕೊಳ್ಳಲು ಗೌರವಾನ್ವಿತ ರಾಜ್ಯಪಾಲರಿಗೆ “ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಕಾನೂನು ಮತ್ತು ಕನ್ನಡ ಸಂಸ್ಕೃತಿ ಸಚಿವರಿಗೆ ಮನವಿಗಳನ್ನು ಸಲ್ಲಿಸಲಾಗಿದೆ
ಎಂದು ಬೆಳಗಾವಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಸಂವಿಧಾನ ರಚನೆಯ ಪೂರ್ವದಲ್ಲಿ ಅಂದರೆ ೧೨ನೆಯ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸುವುದರ ಮೂಲಕ ಕೆಳವರ್ಗದವರು ಸೇರಿದಂತೆ ಎಲ್ಲಾ ವರ್ಗದವರನ್ನು, ಎಲ್ಲಾ ಸಮಾಜದವರನ್ನು ಸೇರಿಸಿಕೊಂಡು ಜಾತ್ಯಾತೀತವಾಗಿ ಜನಪ್ರತಿನಿಧಿಗಳ ಸಭೆ ನಡೆಸುವುದರ ಮೂಲಕ ಇಡೀ ವಿಶ್ವಕ್ಕೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಜಗಜ್ಯೋತಿ ವಿಶ್ವಗುರು ಬಸವಣ್ಣರವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿರುವದನ್ನು ಮಾರ್ಪಡಿಸಿ “ನಾಡಿನ ಆರಾಧ್ಯ ದೈವ ಬಸವಣ್ಣ” ಎಂದು ಸಂಪುಟ ಸಭೆಯಲ್ಲಿ ಮರು ನಿರ್ಧಾರ ಕೈಗೊಂಡು ಪುನಃ ಇದನ್ನು ಅಧಿಕೃತವಾಗಿ ಘೋಷಣೆ ಮಾಡುವುದು ಅತೀ ಅವಶ್ಯವಿರುವುದು ಎಂದು ಸರಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ.

ಬಸವಣ್ಣರವರ ಪರಿಕಲ್ಪನೆಗಳನ್ನು, ವಿಚಾರಧಾರೆಗಳನ್ನು ಅಳವಡಿಸಿಕೊಂಡೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಅಲ್ಲದೇ ಹೆಚ್ಚಿನ ರಾಷ್ಟ್ರಗಳು ಕೂಡಾ ಬಸವಣ್ಣನವರ ಅನುಕರಣೆಗಳನ್ನು ಅಳವಡಿಸಿಕೊಂಡೆ ಸಂವಿಧಾನಗಳನ್ನು ರಚಿಸಿಕೊಂಡಿರುತ್ತವೆ. ಅಲ್ಲದೇ ಅವರ ಆಚಾರ ವಿಚಾರಗಳು ಅಜರಾಮರವಾಗಿ ಉಳಿವಂತಹುಗಳಾಗಿರುವುದರಿಂದ ಮತ್ತು ಇವರ ವಚನಗಳು ಇಡೀ ಮಾನವ ಕುಲಕ್ಕೆ ಸಾರಿದ ಸಂದೇಶಗಳಾಗಿರುವುದರಿAದಲೇ ಇಡೀ ವಿಶ್ವವೇ ಬಸವಣ್ಣರವರನ್ನು ವಿಶ್ವಗುರು ಎಂದು ಈಗಾಗಲೇ ಒಪ್ಪಿಕೊಂಡಿರುವ ವಿಷಯವನ್ನು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಈಗಿನ ಮಾನ್ಯ ಸಭಾಧ್ಯಕ್ಷರು ಮತ್ತು ೦೯ಜನ ಸಚಿವರು ಹಾಗೂ ೩೪ ಜನ ಶಾಸಕರುಗಳು ಸಂವಿಧಾನದ ೩ನೇಯ ಅನುಸೂಚಿಯಡಿಯಲ್ಲಿ ಇರುವ ನಿಬಂಧನೆಗೆ ವಿರುದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಆಕ್ಷೇಪಿಸಿ ಇವರೆಲ್ಲರೂ ಮರು ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ಇವರುಗಳು ಅಧೀವೇಶನದ ಕಲಾಪದಲ್ಲಿ ಭಾಗವಹಿಸಿದ ಪ್ರತಿ ದಿವಸಕ್ಕೆ ೫೦೦ರೂಗಳ ದಂಡವಿಧಿಸಬೇಕೆಂದು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲೀಸಿದ್ದನ್ನು ಮತ್ತು ಈ ಪ್ರಕರಣ ಸಂಖ್ಯೆ : ೨೪೯೩೯/೨೦೨೩ ಇದನ್ನು ದಿನಾಂಕ: ೧೬/೧೨/೨೦೨೩ರಂದು ಉಚ್ಛ ನ್ಯಾಯಾಲಯವು ವಿಚಾರಣೆ ನಡೆಸಿದ್ದನ್ನು ಸಹ ಪತ್ರದಲ್ಲಿ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಗೌರವಾನ್ವಿತ ಮುಖ್ಯನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ “ಬುದ್ಧ, ಬಸವ, ಅಂಬೇಡ್ಕರ ಅವರನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ. ಸಂವಿಧಾನವು “ದೇವರು” ಪದವನ್ನು ಸೂಚಿಸಲು ಬಳಸಿರುವ ಅರ್ಥ ಅದೇ ಆಗಿದೆ ಎಂದು ಅಭಿಪ್ರಾಯ ಪಟ್ಟಿರುವುದು. ಮುಂದುವರೆದು ಕೆಲವು ಸಂದರ್ಭಗಳಲ್ಲಿ ಇವರನ್ನು “ದೈವಾಂಶ ಸಂಭೂತರು” ಎನ್ನಲಾಗಿದೆ. ಇಂಗ್ಲೀಷಿನಲ್ಲಿ ದೇವರು ಎಂದು ಉಲ್ಲೇಖಿಸಲಾಗಿರುವದರ ಅರ್ಥವು ಇದಕ್ಕೆ ಸಮೀಪದಾಗಿದೆ” ಎಂದು ಆದೇಶ ನೀಡಿರುವುದರ ಮೂಲಕ ಅರ್ಜಿಯನ್ನು ವಜಾಗೊಳಿಸಿರುವುದನ್ನು ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ಘನವೆತ್ತ ನ್ಯಾಯಾಲಯವೇ “ಬಸವಣ್ಣರವನ್ನು ದೈವಾಂಶ ಸಂಭೂತರು, ದೈವ ಸ್ವರೂಪಿಗಳು ಎಂದು ಮತ್ತು ಸಂವಿಧಾನವು ದೇವರು ಪದವನ್ನು ಸೂಚಿಸಲು ಬಳಸಿರುವ ಅರ್ಥ ಕೂಡಾ ಇದೇ ಆಗಿದೆ” ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವಾಗ ನಾಡಿನ ಜನರ ಆಶಯದಂತೆ “ನಾಡಿನ ಆರಾಧ್ಯ ದೈವ ಬಸವಣ್ಣ” ಎಂದು ಮರುಘೋಷಣೆ ಮಾಡಿ ಬಸವಣ್ಣರವರ ಘನತೆ ಗೌರವಗಳನ್ನು ಆಕಾಶದೆತ್ತರಕ್ಕೆ ಹೆಚ್ಚಿಸಲು ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.