ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಹಿರಿಯ ವಕೀಲ ಕೆ.ಟಿ.ಡಾಕಪ್ಪ ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ಡಿವಿಜೆ ರಸ್ತೆಯ ಕಚೇರಿಗೆ ಹೋಗಿದ್ದರು. ಮನೆಗೆ ಹೋಗಲು ವಾಪಸ್ ಕಾರ್ ಬಳಿ ಬರುವಾಗ ಬೈಕ್ ಡಿಕ್ಕಿ ಹೊಡೆದಿತ್ತು.
ಅತೀ ವೇಗವಾಗಿ ಕೆಟಿಎಂ ಬೈಕ್ ವಕೀಲ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಡಾಕಪ್ಪರ ತಲೆಗೆ ಗಂಭೀರ ಪೆಟ್ಟಾಗಿತ್ತು. ಹೀಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿಯ ಕೌರಿ ಮೂಲದ ಡಾಕಪ್ಪ ಅವರು ಹೈಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದರು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು.
ಬೈಕ್ ಸವಾರ ಆದಿತ್ಯಾ (21) ಎಂಬಾತನೂ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾನೆ. ಡಾಕಪ್ಪರಿಗೆ ಡಿಕ್ಕಿ ಹೊಡೆದ ಬಳಿಕ ಕಾರಿಗೆ ಗುದ್ದಿದ್ದಾನೆ. ಇದರಿಂದ ಆದಿತ್ಯಾಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದಿತ್ಯಾ ಕಳೆದ 20 ದಿನದ ಹಿಂದಷ್ಟೇ ಡ್ರೈವಿಂಗ್ ಲೆಸೆನ್ಸ್ ಪಡೆದಿದ್ದ ಎನ್ನಲಾಗಿದೆ. ಬಸವನಗುಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.