
ಹೊಸನಗರ: ವಿದ್ಯಾರ್ಥಿಗಳ ಮುಖ ನೋಡದೆ ಧ್ವನಿಯ ಮೇಲೆ ಅವರ ಹೆಸರನ್ನು ಗುರುತಿಸುವ ಕೇರಳದ ಶಿಕ್ಷಕಿಯೊಬ್ಬರ ವಿಡಿಯೋ ವೈರಲ್ ಆಗಿತ್ತು. ಹೊಸನಗರದ ಶಿಕ್ಷಕರೊಬ್ಬರು ಇದೇ ಮಾದರಿಯಲ್ಲಿ ಪ್ರಯತ್ನಿಸಿದ್ದು ರಾಜ್ಯದ ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಬ್ಬಳಗೆರೆ ಅವರ ಧ್ವನಿ ಗುರುತಿಸುವ ಪ್ರಯತ್ನ ಯಶ ಕಂಡಿದೆ. ಅವರು ಮಾಡಿದ ಈ ಸಾಧನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದಾರೆ. ಮುಖ್ಯಶಿಕ್ಷಕ ಯೋಗೀಶ್ ಮೊದಲಿಗೆ ಎಸ್‌ಎಸ್‌ಎಲ್‌ಸಿಯ 50 ವಿದ್ಯಾರ್ಥಿಗಳ ಹೆಸರನ್ನು ಧ್ವನಿಯ ಮೂಲಕ ಅವರು ಹೆಸರು ಹೇಳಿ ಗಮನ ಸೆಳೆದಿದ್ದಾರೆ. ವಸತಿ ಶಾಲೆಯಲ್ಲಿರುವ 250 ವಿದ್ಯಾರ್ಥಿಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನು ಹೇಳುವ ಸಾಮರ್ಥ್ಯ ಹೊಂದಿದ್ದಾರೆ.
ಮಣಿವಣ್ಣನ್ ಸಂದೇಶ: ಕೇರಳದ ವಿಡಿಯೋ ವೈರಲ್
ಆಗುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಮ್ಮ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಿಗೆ ವಿದ್ಯಾರ್ಥಿಗಳ ಧ್ವನಿ ಆಧಾರದ ಮೇಲೆ ಹೆಸರು ಹೇಳುವ ಸಂದೇಶ ನೀಡಿದ್ದರು. ಇದರಲ್ಲಿ ಉತ್ತಮ ಸಾಧನೆ ತೋರುವ 10 ಮಂದಿ ಶಿಕ್ಷಕರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಜೊತೆ ಊಟ ಮಾಡುವ ಅವಕಾಶ ನೀಡಿದ್ದಾರೆ.
‘ಶಾಲೆಯ 10 ನೇ ತರಗತಿಯಲ್ಲಿರುವ 50 ವಿದ್ಯಾರ್ಥಿಗಳ ಹೆಸರುಗಳನ್ನು ಧ್ವನಿಯ ಮೇಲೆ ಗುರುತಿಸಿದ್ದೇನೆ. ಶಾಲೆಯಲ್ಲಿ ಒಟ್ಟು 250 ವಿದ್ಯಾರ್ಥಿಗಳು ಇದ್ದಾರೆ. ಇವರಲ್ಲಿ ಶೇ 90 ರಷ್ಟು ಹೆಸರು ಹೇಳುತ್ತೇನೆ ಎಂಬ ವಿಶ್ವಾಸವಿದೆ’ ಎಂದು ಯೋಗೇಶ್ ಹೆಬ್ಬಳಗೆರೆ ಹೇಳುತ್ತಾರೆ.