Join The Telegram | Join The WhatsApp |
ಉಡುಪಿ-
ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಹೊರ ತೆಗೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ ಮಹಿಳಾ ರೋಗಿಯಲ್ಲಿ ವರದಿಯಾಗಿರುವ ಅತಿ ದೊಡ್ಡ ಮೂತ್ರಕೋಶದ ಕಲ್ಲು ಎಂದು ಮಾಹಿತಿ ಬಹಿರಂಗವಾಗಿದೆ. 60 ವರ್ಷ ವಯಸ್ಸಿನ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರ ದೂರುಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.
ಇತ್ತೀಚೆಗೆ ಕಸ್ತೂರಿ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗೆ ಸರಳ ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಡಾ ಪದ್ಮರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಡಾ ಅಂಶುಮನ್, ಡಾ ಕಾಶಿ ವಿಶ್ವನಾಥ್, ಡಾ ನಿಶಾ, ಡಾ ವಿವೇಕ್ ಪೈ ಮತ್ತು ಡಾ ಕೃಷ್ಣ ಅವರ ತಂಡವು ತೆರೆದ ಸಿಸ್ಟೊಲಿಥೊಟಮಿ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲನ್ನ ಹೊರ ತೆಗೆದಿದ್ದಾರೆ. ಎರಡನೇ ದಿನ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಆರೋಗ್ಯವಂತ ವಯಸ್ಕ ಮಹಿಳೆಯಲ್ಲಿ ಇಂತಹ ದೈತ್ಯ ಮೂತ್ರಕೋಶದ ಕಲ್ಲು ಪತ್ತೆಯಾಗಿದ್ದು, ನಮ್ಮ ಜ್ಞಾನದ ಪ್ರಕಾರ ಇದು ವಿಶ್ವದಲ್ಲೇ ಮೊದಲು. ಇಲ್ಲಿಯವರೆಗೆ ಅತಿದೊಡ್ಡ ಮೂತ್ರಕೋಶದ ಕಲ್ಲು ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ (528 ಗ್ರಾಂ) ಪತ್ತೆ ಯಾಗಿತ್ತು. ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ತಂಡವನ್ನು ಮಾಹೆ ಮಣಿಪಾಲದ ಬೋಧ ನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಅಭಿನಂದಿಸಿದ್ದಾರೆ.
Join The Telegram | Join The WhatsApp |