ಲಖನೌ: ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಶವ ಕೆಲವು ತಿಂಗಳ ಹಿಂದೆ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗಿತ್ತು. ಶಾಲೆಯ ಶ್ರೇಯಸ್ಸಿಗಾಗಿ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಆರಂಭದಲ್ಲಿ ಸುದ್ದಿಯಾಗಿತ್ತು. ಆದರೆ, ಕಾರಣವೇ ಬೇರೆ! ಅದನ್ನು ಪತ್ತೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ
ಹಾಥರಸ್‌ನ ರಾಸ್‌ಗವಾನ್‌ನಲ್ಲಿರುವ ಖಾಸಗಿ ಶಾಲೆಯ ನಿರ್ದೇಶಕ ದಿನೇಶ್ ಬಘಲ್ ಹಾಗೂ ಇತರ ನಾಲ್ಕು ಮಂದಿಯನ್ನು ವಿದ್ಯಾರ್ಥಿ ಹತ್ಯೆ ಪ್ರಕರಣ ಸಂಬಂಧ ಬಂಧಿಸಲಾಗಿತ್ತು.
ತನಿಖೆ ಮುಂದುವರಿದಂತೆ, 8 ನೇ ತರಗತಿಯ ವಿದ್ಯಾರ್ಥಿಯೊಬ್ಬ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಆತ, ರಜೆ ಪಡೆಯುವುದಕ್ಕಾಗಿ ಈ ಕೃತ್ಯವೆಸಗಿದ್ದ ಎಂಬುದು ಬಹಿರಂಗಗೊಂಡಿದೆ.
ಕೆಲವು ದಿನಗಳ ಹಿಂದೆ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ಪ್ರಕಾರ, ಆರೋಪಿ ಬಾಲಕನಿಗೆ ಮೊಬೈಲ್ ಬಳಕೆಯ ಗೀಳು ಇತ್ತು. ಹಾಗಾಗಿ, ಶಾಲೆಗೆ ರಜೆ ಸಿಕ್ಕರೆ ಹಾಸ್ಟೆಲ್‌ನಿಂದ ಹೋಗಬಹುದು ಎಂಬುದು ಅವನ ಉದ್ದೇಶವಾಗಿತ್ತು ಎನ್ನಲಾಗಿದೆ.
ಯಾವುದೋ ಊರಿನಲ್ಲಿ ವಿದ್ಯಾರ್ಥಿ ಮೃತಪಟ್ಟ ಕಾರಣ, ಹಲವು ದಿನಗಳವರೆಗೆ ಶಾಲೆಗೆ ಬೀಗಹಾಕಲಾಗಿತ್ತು ಎಂಬ ಸುದ್ದಿಯನ್ನು ಆರೋಪಿ ತಿಳಿದಿದ್ದ. ಅದರಂತೆ, ಬಾಲಕನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಕೊಲೆ ಮಾಡಿದ್ದ. ನಂತರ ಟವಲ್ ಅನ್ನು ಶಾಲಾ ಕಟ್ಟಡದ ಹಿಂದಕ್ಕೆ ಎಸೆದು, ತನ್ನ ಜಾಗಕ್ಕೆ ಹೋಗಿ ಮಲಗಿದ್ದ ಎಂದು ಉಲ್ಲೇಖಿಸಿದ್ದಾರೆ.
ಸದ್ಯ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮೃತ ಬಾಲಕನ ಪೋಷಕರು, ಶಾಲೆಯ ನಿರ್ದೇಶಕ ಮತ್ತು ಇತರ ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಪೊಲೀಸರು 8ನೇ ತರಗತಿ ವಿದ್ಯಾರ್ಥಿಯನ್ನು ಗುರಾಣಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಕಿರುಕುಳಕ್ಕೆ ಹೆದರಿ ಕೊಲೆ ಆರೋಪವನ್ನು ಒಪ್ಪಿಕೊಂಡಿದ್ದೆವು ಎಂದು ಶಾಲೆಯ ನಿರ್ದೇಶಕ ಹಾಗೂ ಇತರ ನಾಲ್ಕು ಮಂದಿ ಹೇಳಿಕೆ ನೀಡಿದ್ದಾರೆ. ಸದ್ಯ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಆದಾಗ್ಯೂ, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ ಅವರ ಮೇಲಿದೆ.