ಬೆಳಗಾವಿ : ಸಪ್ತಸ್ವರ ಸಂಗೀತ ವಿದ್ಯಾಲಯದ ಬೆಳ್ಳಿ ಹಬ್ಬ ಸಂಗೀತದ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಜ.18,19 ರಂದು ಬೆಳಗಾವಿಯ ಐಎಂಇಆರ್ ಸಭಾಗೃಹದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ
ಮೊದಲ ದಿನ ಮಧ್ಯಾಹ್ನ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಹಾಡುಗಾರಿಕೆ ನಡೆಯಲಿದೆ.ಎರಡನೆಯ ದಿನ ರವಿವಾರ ಬೆಳಿಗ್ಗೆ 11 ರಿಂದ 1:30 ರವರೆಗೆ “ಸಂಗೀತ ಸಂವಾದ” ಎಂಬ ಒಂದು ವಿಶೇಷ ಕಾರ್ಯಕ್ರಮ ಇಡಲಾಗಿದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯ ಮೂಲ, ಸಾಗಿಬಂದ ದಾರಿ, ಸಂಗೀತದ ವಿವಿಧ ಪ್ರಕಾರಗಳ ಶೈಲಿಯ ವೈಶಿಷ್ಟ್ಯ ಮೊದಲಾದ ವಿಚಾರಗಳ ಚರ್ಚೆಯಿದೆ.
ಮುಂಬಯಿಯ ಪಂ. ಮಹೇಶ ಕುಲಕರ್ಣಿ ಪ್ರಾಯೋಗಿಕ ವಿಭಾಗದಲ್ಲಿ ಮತ್ತು ಸಂವಾದದಲ್ಲಿ ಹಿರಿಯ ಗಾಯಕ ನಂದನ ಹೆರ್ಲೆಕರ, ಸಂಗೀತ ತಜ್ಞ ಸಾಹಿತಿ ಶಿರೀಷ ಜೋಶಿ, ಪತ್ರಕರ್ತ, ಸಾಹಿತಿ ಎಲ್. ಎಸ್. ಶಾಸ್ತ್ರಿ, ಇವರು ವಿಚಾರ ಮಂಡಿಸಲಿದ್ದು ರಂಗತಜ್ಞ , ಚಿಂತಕ ಶ್ರೀಪತಿ ಮಂಜನಬೈಲು ಅವರು ಸಂಯೋಜಕ/ ನಿರೂಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಕುಂದ ಗೋರೆ, ನಾರಾಯಣ ಗಣಾಚಾರಿ ಮತ್ತು ಯೋಗೇಶ ರಾಮದಾಸ ಅವರು ವಾದನಸಹಕಾರ ನೀಡಲಿದ್ದಾರೆ. ವಿದುಷಿ ನಿರ್ಮಲಾ ಪ್ರಕಾಶ ಉಪಸ್ಥಿತರಿರುವರು.
ಇದರಲ್ಲಿ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವ್ಯಾಪಕ ವಿಷಯಗಳು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಲ್ಪಡಲಿವೆ. ಸಂಗೀತಾಭ್ಯಾಸಿಗಳಿಗೆ , ಸಂಗೀತಾಸಕ್ತರಿಗೆ ಉಪಯುಕ್ತವಾದ ವಿಚಾರಗಳನ್ನು ಸಂವಾದದ ಮೂಲಕ ಇಲ್ಲಿ ಪ್ರಸ್ತುತ ಪಡಿಸಲಾಗುವುದು. ಇದೊಂದು ಅಪರೂಪದ ಕಾರ್ಯಕ್ರಮ.
ಎರಡೂ ದಿನ ಸಪ್ತಸ್ವರದ ವಿದ್ಯಾರ್ಥಿಗಳಿಂದ ಗಾಯನ ವಾದನ ನರ್ತನಗಳು ನಡೆಯಲಿವೆ.