ಬೆಂಗಳೂರು : ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ದೇವರ ಮೇಲೆ ಭಕ್ತಿ ತೋರಿಸುವ ಹಲವು ವೀಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಕೆಲ ದಿನಗಳ ಹಿಂದಷ್ಟೇ ಬೆಕ್ಕೊಂದು ಶನಿಸಿಂಗ್ನಾಪುರದ ದೇಗುಲದಲ್ಲಿ ದೇವರ ಮೂರ್ತಿಗೆ ಮನುಷ್ಯರಂತೆ ನಿರಂತರ ಸುತ್ತು ಬರುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಈಗ ಕರಡಿಯೊಂದು ದೇಗುಲದಲ್ಲಿ ಶಿವಲಿಂಗವನ್ನು ಭಕ್ತಿಯಿಂದ ತಬ್ಬಿಕೊಳ್ಳುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಜನ ಕರಡಿಯ ಭಕ್ತಿ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಛತ್ತೀಸ್‌ಗಢದ ಬಗ್‌ಬಹರ್‌ನ ಚಂಡಿ ಮಾತ ಮಂದಿರದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಶಿವಲಿಂಗವನ್ನು ಎರಡು ಕೈಗಳಿಂದ ಗಟ್ಟಿಯಾಗಿ ತಬ್ಬಿಕೊಂಡು ಲಿಂಗದ ಮೇಲೆ ಕರಡಿ ತಲೆಇಟ್ಟು ನೆಮ್ಮದಿಯ ನಿಟ್ಟುಸಿರುಬಿಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನ ಅಚ್ಚರಿ ವ್ಯಕ್ತಪಡಿಸಿದ್ದು, ಕಾಮೆಂಟ್‌ಗಳಲ್ಲಿ ಹರ್‌ ಹರ್ ಮಹಾದೇವ್ ಜೈ ಪಶುಪತಿನಾಥ ಎಂದೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇಗುಲದಲ್ಲಿರುವ ಶಿವಲಿಂಗದಂತೆ ಈ ಶಿವಲಿಂಗವೂ ಗೋಚರಿಸುತ್ತಿದೆ. ಈ ಶಿವಲಿಂಗದ ಮೇಲೇರಿದ ಕರಡಿ ಬಳಿಕ ತನ್ನೆರಡು ಕೈಗಳಿಂದ ಶಿವಲಿಂಗವನ್ನು ಗಟ್ಟಿಯಾಗಿ ತಬ್ಬಿಕೊಂಡಿದೆ. ವೀಡಿಯೋ ನೋಡಿದ ಜನ ಈ ಕರಡಿಯೂ ತನ್ನದೇ ಆದ ರೀತಿಯಲ್ಲಿ ಮಹದೇವನ ಆರಾಧನೆ ಮಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕರಡಿ ಸಂತೋಷದಿಂದ ಸಂವಹನ ನಡೆಸಿ ಶಿವಲಿಂಗಕ್ಕೆ ಪ್ರೀತಿಯನ್ನು ಅರ್ಪಿಸಿದೆ. ಈ ಅನಿರೀಕ್ಷಿತ ಮತ್ತು ಅಪರೂಪದ ಕ್ಷಣವನ್ನು ಅನೇಕರು ದೈವಿಕ ಸಂಪರ್ಕದ ಸಂಕೇತವೆಂದು ವ್ಯಾಖ್ಯಾನಿಸಿದ್ದಾರೆ.

ಈ ಭೂಮಿ ಮೇಲಿರುವ ಕಲ್ಲು ಮುಳ್ಳು ಹೂವು ಹಣ್ಣು ಹೀಗೆ ಚರಾಚರಗಳಲ್ಲಿ ಭಗವಂತನಿದ್ದಾನೆ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಹಾಗೆಯೇ ಇಲ್ಲಿ ಕರಡಿಯ ಭಕ್ತಿ ಶಿವಭಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದು, ಕರಡಿ ಪಶುಪತಿನಾಥನ ಬಳಿ ಆಶೀರ್ವಾದ ಬೇಡಲು ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.