ಹರ್ದೋಯ್ : ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಓಡಿಹೋದ ಘಟನೆ ನಡೆದಿದೆ. ಪತಿ ರಾಜು ಅಪಹರಣದ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ ನಂತರ ಮಹಿಳೆ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ದೂರಿನಲ್ಲಿ, 45 ವರ್ಷದ ರಾಜು ಅವರು, ತಾವು ತಮ್ಮ ಪತ್ನಿ ರಾಜೇಶ್ವರಿ ಮತ್ತು ಅವರ ಆರು ಮಕ್ಕಳೊಂದಿಗೆ ಹರ್ದೋಯ್‌ನ ಹರ್ಪಾಲಪುರ ಪ್ರದೇಶದಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ನಲವತ್ತೈದು ವರ್ಷದ ನನ್ಹೆ ಪಂಡಿತ್, ಕೆಲವೊಮ್ಮೆ ಭಿಕ್ಷೆ ಬೇಡಲು ಅಕ್ಕಪಕ್ಕದ ಮನೆಗೆ ಬರುತ್ತಿದ್ದ ಎಂದು ಅವರು ಹೇಳಿದ್ದಾರೆ. ನನ್ಹೆ ಪಂಡಿತ್ ಆಗಾಗ್ಗೆ ರಾಜೇಶ್ವರಿ ಅವರೊಂದಿಗೆ ಹರಟೆ ಹೊಡೆಯುತ್ತಿದ್ದ ಮತ್ತು ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

”ಜನವರಿ 3ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ಮಗಳು ಖುಷ್ಬೂ ಬಳಿ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿದ್ದಳು, ಆಕೆ ವಾಪಸ್ ಬಾರದೆ ಇದ್ದಾಗ ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ನಾನು ಎಮ್ಮೆಯನ್ನು ಮಾರಿ ಸಂಪಾದಿಸಿದ ಹಣವಿಲ್ಲ. ನನ್ಹೆ ಪಂಡಿತ್ ಆಕೆಯನ್ನು ತನ್ನೊಂದಿಗೆ ಕರೆದೊಯ್ದಿರುವ ಶಂಕೆ ಇದೆ ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಸಂಡಿ ಪ್ರದೇಶದ ನಿವಾಸಿ ನನ್ಹೆ ಪಂಡಿತ್, ಭಿಕ್ಷೆ ಬೇಡಲು ಮಹಿಳೆಯ ಮನೆಗೆ ಹೋಗುತ್ತಿದ್ದ ಎಂದು ವರದಿಗಳು ತಿಳಿಸಿವೆ. ಮಹಿಳೆ ಆಗಾಗ್ಗೆ ಅವನಿಗೆ ಸ್ವಲ್ಪ ಆಹಾರ ಅಥವಾ ಧಾನ್ಯಗಳನ್ನು ನೀಡುತ್ತಿದ್ದಳು ಎಂದು ಹೇಳಲಾಗಿದೆ.
ಮಹಿಳೆಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿಲ್ಪಾ ಕುಮಾರಿ ತಿಳಿಸಿದ್ದಾರೆ. ನನ್ಹೆ ಪಂಡಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 87 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.