ಬೆಳಗಾವಿ:
ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಯುವತಿ ಸುಮಾರು 50 ಮೀಟರ್ ಹಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಬ್ರಹ್ಮನಗರ ನಿವಾಸಿ ದಿವ್ಯಾ ಸುಜಯ್ ಪಾಟೀಲ (23) ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವತಿ. ವೇಗವಾಗಿ ಬಂದ ಕಾರು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಸ್ಕೂಟಿ ಜೊತೆಗೆ ಮುಂದಿದ್ದ ಮತ್ತರೆಡು ಕಾರುಗಳಿಗೂ ಗುದ್ದಿದೆ. ಸರಣಿ ಅಪಘಾತದ ಪರಿಣಾಮ ಸ್ಕೂಟಿ ಪೀಸ್ ಪೀಸ್ ಆಗಿದ್ದು, ಮೂರೂ ಕಾರುಗಳು ಜಖಂಗೊಂಡಿದೆ.
ಗಾಯಾಳು ದಿವ್ಯಾ ಬೆಳಗಾವಿಯ ಮಜಗಾವಿ ಕಡೆಯಿಂದ ಪೀರನವಾಡಿ ಕಡೆಗೆ ಹೊರಟಿದ್ದರು. ಈ ವೇಳೆ ಕಾರು ಚಾಲಕ ಭರತ್ ಚೌಗಲೆ ಎಂಬಾತನಿಂದ ಈ ಸರಣಿ ಅಪಘಾತ ನಡೆದಿದೆ. ಸ್ಕೂಟಿ ಹಾಗೂ ಕಾರುಗಳ ನಡುವಿನ ಸರಣಿ ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ದಿವ್ಯಾ ಪಾಟೀಲ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಬೆಳಗಾವಿ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.