ಬೆಂಗಳೂರು : ಕರ್ನಾಟಕ ರಾಜ್ಯ ಕಂಬಳ ಸಂಸ್ಥೆ ರಚಿಸಿ ಅಗತ್ಯ ದಾಖಲಾತಿಯೊಂದಿಗೆ ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಮಾನ್ಯತೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಂಬಳ ಸಂಸ್ಥೆ ರಚಿಸುವ ಸಂಬಂಧ ಚರ್ಚಿಸಲಾಗಿತ್ತು. ಈ ಸಭೆಯಲ್ಲಿ ರಾಜ್ಯ ಕಂಬಳ ಸಂಸ್ಥೆ ರಚಿಸಲು ಎರಡು ತಂಡಗಳು ಮುಂದಾಗಿದ್ದರಿಂದ ಈ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅಂತೆಯೇ ಯಥಾಸ್ಥಿತಿಯನ್ನು ಮುಂದುವರೆಸಲಾಗಿದೆ ಎಂದರು. ಕಂಬಳ ಸಂಸ್ಥೆ ರಚನೆ ನಂತರ ಕಂಬಳ ಕ್ರೀಡೆಯನ್ನು ರಾಜ್ಯ ಕ್ರೀಡೆ ಅಥವಾ ಕರಾವಳಿಯ ಕ್ರೀಡೆಯಾಗಿ ಘೋಷಿಸಿ, ವಾರ್ಷಿಕ ಅನುದಾನ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.