ಹುಬ್ಬಳ್ಳಿ : ಗುರುವಾರ (ಏ.18) ಮಧ್ಯಾಹ್ನ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿ ಫಯಾಜ್​ನನ್ನು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ಫಯಾಜ್​ ಕಾರಾಗೃಹ ಸಿಬ್ಬಂದಿ ಎದುರು ಕೊಲೆ ಕಾರಣವನ್ನು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ನೇಹಾ ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ ಅಂತ ಆರೋಪಿ ಫಯಾಜ್​ ಕಾರಾಗೃಹ ಸಿಬ್ಬಂದಿ ಎದುರು ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೆ ಅವತ್ತು ಏನೆಲ್ಲ ಘಟನೆ ನಡೆಯಿತು ಎಂಬುವುದನ್ನು ವಿವರಿಸಿದ್ದಾನಂತೆ.

ಘಟನೆ ನಡೆಯುವುದಕ್ಕೂ ಮುಂಚೆಯೇ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜ್​ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು (ನೇಹಾ) ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ ಅಂತ ಅವೈಡ್ ಮಾಡಿ, ಹೊರಟು ಹೋದಳು.

ಏಪ್ರಿಲ್​ 18 ರಂದು ಅವಳು ಪರೀಕ್ಷೆ ಬರೆಯಲು ಬಿವಿಬಿ ಕಾಲೇಜಿಗೆ ಬಂದಿದ್ದಳು. ನಾನು ಮತ್ತೆ ಅಂದು ಕಾಲೇಜಿಗೆ ಹೋದೆ. ಪರೀಕ್ಷೆ ಮುಗಿಯುವವರೆಗೂ ಕಾಯ್ದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು ಮಾತಾಡಲ್ಲ ಅಂದಳು. ಹೀಗಾಗಿ ಅವಳಿಗೆ ಚಾಕುವಿನಿಂದ ಹತ್ತು ಬಾರಿ ಚುಚ್ಚಿದೆ. ಅವಳಿಗೆ ಚಾಕು ಹಾಕುವ ವೇಳೆ ನನ್ನ ಎರಡು ಕೈ ಬೆರಳುಗಳಿಗೆ, ಕಾಲಿಗೂ ಗಾಯವಾಗಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಅಂದಳು ನಾನು ಚಾಕು ಹಾಕಿದ್ದೇನೆ ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್​ ಹೇಳಿದ್ದಾನೆ.