ಮಂಗಳೂರು: ದುಷ್ಕರ್ಮಿಯೊಬ್ಬ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಮುಸುಕು ಧರಿಸಿ ಬಂದಿದ್ದು, ದಾಳಿ ನಡೆಸಿದ ಆರೋಪಿ ಅಬೀನ್‌ ಎಂಬಾತ ಪರಾರಿಯಾಗಲು ಯತ್ನಿಸಿದಾಗ ಅಲ್ಲಿದ್ದ ವಿದ್ಯಾರ್ಥಿಗಳು ಆತನನ್ನು ಹಿಡಿದಿದ್ದಾರೆ. ವಿಷಯ ತಿಳಿದು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಕೇರಳ ಮೂಲದ ಅಬೀನ್ ಎಂಬಾತ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಲೀನಾ ಸಿ.ಬಿ, ಅರ್ಚನಾ ಹಾಗೂ ಅಮೃತ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಕಡಬ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಆ್ಯಸಿಡ್ ದಾಳಿ ನಡೆದಿದೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಆರೋಪಿಯು ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿಕೊಂಡು ಬಂದು ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿ ಅಬೀನ್ ಕೇರಳದವನಾಗಿದ್ದು, 23 ವರ್ಷದ ಈತ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ. 17 ವರ್ಷದ ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿದ್ದಾನೆ. ಆಕೆ ಕಡಬ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿಯಾಗಿದ್ದು, ಆಕೆಗೆ ತೀವ್ರ ಸುಟ್ಟ ಗಾಯಗಳಾಗಿದೆ. ಅಲ್ಲದೆ, ಪಕ್ಕದಲ್ಲಿ ಕುಳಿತಿದ್ದ ಮತ್ತಿಬ್ಬರು ಹುಡುಗಿಯರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದೆ.

ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ. ಆರೋಪಿ ಅಬೀನ್‌ ಅಲಿನಾಳನ್ನು ಟಾರ್ಗೆಟ್ ಮಾಡಿ‌ ಬಂದಿದ್ದ. ಅಲಿನಾ ಹಾಗೂ ಅಬೀನ್‌ ಇಬ್ಬರು ಒಂದೇ ಕೋಮಿಗೆ ಸೇರಿದ್ದರು. ಕೇರಳ ಮಲಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್‌ ಅಲಿನಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಅಲೀನಾ ಆತನ ಪ್ರೇಮವನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈ ಸಿಟ್ಟಿಗೆ ಪರೀಕ್ಷೆ ಟೈಂ ನೋಡಿಕೊಂಡು ಆ್ಯಸಿಡ್ ಹಾಕಿದ್ದಾನೆ.

ಆ್ಯಸಿಡ್ ಹಾಕಿ ಆರೋಪಿ ಅಬೀನ್‌ ಪರಾರಿ ಆಗಲು ಯತ್ನಿಸಿದ್ದ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಈ ಘಟನೆಯಿಂದ ಕಂಗಲಾಗಿದ್ದು, ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಕಾಲೇಜು ಆವರಣದಲ್ಲೇ ಆ್ಯಸಿಡ್ ದಾಳಿ ನಡೆದಿರುವುದನ್ನು ಕಂಡ ಇತರೆ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ.