ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನಲ್ಲಿರುವ ಆರೋಪಿಗಳಿಗೆ ಮತ್ತೆ 5 ದಿನ ಕಸ್ಟಡಿಗೆ ವಿಧಿಸಿ ಆದೇಶಿಸಲಾಗಿದೆ.

6 ದಿನಗಳ ಪೊಲೀಸ್ ಕಸ್ಟಡಿಯ ತನಿಖೆಯ ಬಳಿಕ ಪೊಲೀಸರು, ಅನ್ನಪೂರ್ಣ ಠಾಣೆಯಿಂದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಟ ದರ್ಶನ್ ಸೇರಿದಂತೆ ಉಳಿದ ಆರೋಪಿಗಳಿಗೆ 5 ದಿನ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲು ಆದೇಶ ನೀಡಿದರು.

ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಕೇಸ್‌ನ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಮತ್ತೊಂದೆಡೆ ಪೊಲೀಸರು ಸ್ಥಳ ಮಹಜರು, ಸಾಕ್ಷ್ಯಗಳ ಕುರಿತ ವರದಿಯನ್ನು ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿದರು. ಬೆಂಗಳೂರು, ಚಿತ್ರದುರ್ಗದಲ್ಲಿ ಮಹಜರು ನಡೆದಿದೆ, ಆದರೆ, ಮೈಸೂರಿನಲ್ಲಿ ಮಹಜರು ಬಾಕಿ ಇದೆ. ಹೀಗಾಗಿ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು.

ದರ್ಶನ್‌ ಪರ ವಕೀಲ ಅನಿಲ್ ಬಾಬು ವಾದ ಮಂಡಿಸಿ, ಆರೋಪಿಗಳಿಗೆ ವಿಚಾರಣೆ ವೇಳೆ ಹಿಂಸೆ ಕೊಟ್ಟಿದ್ದಾರೆ. ಮಹಿಳಾ ಆರೋಪಿ ಪವಿತ್ರಾ ಗೌಡಳನ್ನೂ 6 ದಿನ ವಿಚಾರಣೆ ನಡೆಸಲಾಗಿದೆ. ಎಲ್ಲದಕ್ಕೂ ದರ್ಶನ್‌ ಕಾರಣ ಎಂದರೆ ಹೇಗೆ? ವಿಚಾರಣೆ ಹಂತದಲ್ಲಿದ್ದಾಗಲೇ ದರ್ಶನ್‌ ಮೇಲೆ ಎಲ್ಲಾ ಅರೋಪಗಳನ್ನು ಮಾಡುವುದು ಎಷ್ಟು ಸರಿ? ಪವಿತ್ರಾ ಗೌಡ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆರೋಪಿಗಳ ಹೇಳಿಕೆಗಳೂ ಸೋರಿಕೆಯಾಗುತ್ತಿವೆ. ಹೀಗಾಗಿ ಮತ್ತೆ ಕಸ್ಟಡಿಗೆ ನೀಡುವುದು ಬೇಡ ಹೇಳಿದರು.

ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮುಂದುವರಿಸಿ‌, ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಹಿಂಸೆ ನೀಡಲಾಗಿದೆ. ಆರೋಪಿಗಳು ಯಾವೆಲ್ಲಾ ಡಿವೈಸ್‌ ಬಳಸಿದ್ದಾರೋ, ಅವುಗಳನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಸಮಯಾವಕಾಶ ಬೇಕು. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಪವಿತ್ರಾ ಗೌಡ ಪರ ವಕೀಲ ನಾರಾಯಾಣಸ್ವಾಮಿ, ನನ್ನ ಕಕ್ಷಿದಾರರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು. ವಾದ-ಪ್ರತಿವಾದ ಅಲಿಸಿದ ಬಳಿಕ ನ್ಯಾಯಾಧೀಶರು, ಆರೋಪಿಗಳನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲು ಸೂಚಿಸಿದರು.

ದರ್ಶನ್‌, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಹಿಂದೆ ಕಸ್ಟಡಿಗೆ ನೀಡುವಾಗ ದರ್ಶನ್‌ ಕಣ್ಣೀರು ಹಾಕಿದ್ದರು. ಇದೀಗ ಕೋರ್ಟ್‌ಗೆ ಹಾಜರಾಗುತ್ತಿದ್ದಂತೆ ಎ 1 ಪವಿತ್ರಾ ಗೌಡ ಗಳಗಳನೆ ಅತ್ತಿದ್ದಾರೆ.