ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ನಟ ದರ್ಶನ್ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ, ಪ್ರಚಾರದ ವೇಳೆ ನಟ ದರ್ಶನ್ ಇದ್ದ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ನಟ ದರ್ಶನ್ ಪ್ರಚಾರದಲ್ಲಿ ತೊಡಗಿದ್ದರು. ಪ್ರಚಾರದ ವಾಹನ ವೇಗವಾಗಿ ಮುಂದೆ ಸಾಗುತ್ತಿದ್ದಾಗ ದಿಢೀರ್ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ ಕೂಡಲೇ ತುಂಡಾಗಿ ಬಿದ್ದಿದ್ದರಿಂದ ಅನಾಹುತ ತಪ್ಪಿದೆ.

ಈ ಘಟನೆಯಲ್ಲಿ ನಟ ದರ್ಶನ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣವಿತ್ತು. ಈ ಘಟನೆಯ ಬಳಿಕ ನಟ ದರ್ಶನ್ ಅವರು ಚುನಾವಣಾ ಪ್ರಚಾರ ಮೊಟಕುಗೊಳಿಸಿ, ಬೆಂಗಳೂರಿಗೆ ತೆರಳಿದರು ಎಂಬುದಾಗಿ ತಿಳಿದುಬಂದಿದೆ.