ಗದಗ:
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರ ಸಾವಿಗೀಡಾದ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಸೂರಣಗಿ ಗ್ರಾಮದ ಹನುಮಂತ ಹರಿಜನ(21), ಮುರಳಿ ನಡವಿನಮನಿ(20), ನವೀನ ಗಾಜಿ(19) ಎಂದು ಗುರುತಿಸಲಾಗಿದೆ.
ಗಾಯಗೊಂಡ ಮೂವರನ್ನು ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾಕಿಂಗ್ ಸ್ಟಾರ್ ಜನ್ಮದಿನವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದ ಸೂರಣಗಿ ಗ್ರಾಮದ‌ 10ಕ್ಕೂ ಯುವಕರು 25 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟಿಗೆ ವಿದ್ಯುತ್ ತಂತಿ ಸ್ಪರ್ಷಿಸಿ ದುರ್ಘಟನೆ ಸಂಭವಿಸಿದೆ. ಮೃತ ಯುವಕರ ಮನೆಯಲ್ಲಿ ಶೋಕ ಮಡುಗಟ್ಟಿದೆ.