ಬೆಂಗಳೂರು: ಕಿನ್ನರಿ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿ, ಬಿಗ್ ಬಾಸ್ ಮೂಲಕ ಇನ್ನಷ್ಟು ಹತ್ತಿರವಾಗಿದ್ದ ಭೂಮಿ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿ ಕಲಾಲೋಕದಲ್ಲಿ ಮಿಂಚಿದ್ದಾರೆ.

ಮೂಲತಃ ಕುಂದಾಪುರದವರಾಗಿರುವ ಭೂಮಿ ಅವರಿಗೆ ಯಕ್ಷಗಾನ ಹೊಸದೇನಲ್ಲ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಲವ-ಕುಶ ಆಟದಲ್ಲಿ ಸೀತೆಯ ಪಾತ್ರ ನಿರ್ವಹಿಸಿರುವ ಭೂಮಿ, ಚೌಕಿಯಲ್ಲಿ ಕುಳಿತು ಬಣ್ಣ ಹಚ್ಚಿಕೊಂಡು ತಯಾರಾದ ಕುರಿತ ವಿಡಿಯೊ ಹಂಚಿಕೊಂಡಿದ್ದಾರೆ.

ಕಳೆದ ವರ್ಷ 2024ರ ಮಾರ್ಚ್‌ನಲ್ಲಿಯೂ ಭೂಮಿ ಅವರು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ್ದರು.

ಈ ಕುರಿತು ಬರೆದುಕೊಂಡಿರುವ ಅವರು, ‘ಯಕ್ಷಗಾನ ನನ್ನ ಪಾಲಿಗೆ ಕಲೆಗಿಂತ ದೊಡ್ಡದು. ಇದು ಒಂದು ಪವಿತ್ರ ಆಚರಣೆ, ನಾನು ಹೆಮ್ಮೆಯಿಂದ ಎತ್ತಿಹಿಡಿಯುವ ಸಂಪ್ರದಾಯ. ಈ ಕಲೆಗೆ ನಾನು ನೀಡುವ ಪ್ರತಿ ಪ್ರದರ್ಶನವೂ ನನ್ನ ಕೊಡುಗೆಯಾಗಿದೆ. ಈ ವರ್ಷ ವಿಶೇಷವಾಗಿತ್ತು, ಏಕೆಂದರೆ, ಲವ-ಕುಶ ಮಹಾಕಾವ್ಯದಲ್ಲಿ ಸೀತೆಯಾಗಿ, ಸ್ತ್ರೀ ವೇಷ ಧರಿಸಿದ್ದೆ’ ಎಂದಿದ್ದಾರೆ.

ಈ ಕಲಾ ಪ್ರಕಾರದಲ್ಲಿ ಆಯ್ಕೆಯಾಗುವುದು ಮತ್ತು ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುವುದು ನನ್ನಿಷ್ಟದ ಕೆಲಸವಾಗಿದೆ. ನನ್ನಿಂದ ಸಾಧ್ಯವಾಗುವವರೆಗೆ, ಶ್ರದ್ಧೆಯಿಂದ ಸೇವೆ ಮಾಡುತ್ತೇನೆ, ಈ ಕಲೆಯನ್ನು ಹೆಮ್ಮೆಯಿಂದ ಮುನ್ನಡೆಸುತ್ತೇನೆ’ ಎಂದು ಭೂಮಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.