Join The Telegram | Join The WhatsApp |
ಬೆಂಗಳೂರು:
ನೈಸರ್ಗಿಕ ಮಕ್ಕಳು ಹಾಗೂ ದತ್ತು ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ದತ್ತು ಮಕ್ಕಳೂ ಅನುಕಂಪದ ನೌಕರಿ ಪಡೆಯಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ. ನೈಸರ್ಗಿಕ ಮಕ್ಕಳು ಹಾಗೂ ದತ್ತು ಮಕ್ಕಳ ನಡುವೆ ವ್ಯತ್ಯಾಸ ಮಾಡಿದರೆ ದತ್ತು ತೆಗೆದುಕೊಳ್ಳುವ ಉದ್ದೇಶ ನಿರರ್ಥಕವಾಗಲಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ.
ಅಭಿಯೋಜನೆ ವಿಭಾಗದಲ್ಲಿ ದಲಾಯತ್ ಆಗಿದ್ದ ವಿನಾಯಕ್ ಮುತ್ತತ್ತಿ ಅವರು 2010ರಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ನೌಕರಿಗೆ ಗಿರೀಶ್ ಅವರು ಅರ್ಜಿ ಹಾಕಿದ್ದರು. ಆದರೆ ಗಿರೀಶ್ ಅವರು ವಿನಾಯಕ್ ಅವರ ದತ್ತು ಪುತ್ರನೆಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸಲಾಗಿತ್ತು.
ದತ್ತುಪುತ್ರನೆಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸಿದ ಹಿನ್ನೆಲೆ ಗಿರೀಶ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಅನುಕಂಪದಡಿ ನೌಕರಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಗಿರೀಶ್ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ.ಸೂರಜ್ ಗೋವಿಂದರಾಜ್, ಜಿ.ಬಸವರಾಜರವರಿದ್ದ ವಿಭಾಗೀಯ ಪೀಠ, ದತ್ತು ಸ್ವೀಕಾರದ ಉದ್ದೇಶವನ್ನು ಮನಗಂಡು ದತ್ತು ಮಕ್ಕಳೂ ಅನುಕಂಪದ ನೌಕರಿ ಪಡೆಯಬಹುದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
Join The Telegram | Join The WhatsApp |