ಉಡುಪಿ/ಕುಂದಾಪುರ : ಮಂಗಳೂರು-ಉಡುಪಿ-ಮುಂಬೈ ಬೆಸೆಯುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಎಲ್‌ಹೆಚ್‌ಬಿ ಬೋಗಿಗಳನ್ನು ಅಳವಡಿಸುವ ವಿಚಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ. ಈ ನಡುವೆ ಎಲ್‌ಹೆಚ್‌ಬಿ ಅಂದರೆ ಏನು? ಇದರ ವಿಶೇಷತೆಗಳೇನು ಎಂಬುದು ಹಲವರ ಪ್ರಶ್ನೆಯಾಗಿದೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಭಾಗ್ಮತಿ ಎಕ್ಸ್‌ಪ್ರೆಸ್ ರೈಲು ದುರಂತದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಹಳಿ ತಪ್ಪಿದ ರೈಲು ಮತ್ತೊಂದು ಹಳಿಗೆ ನುಗ್ಗಿದ ಕಾರಣ ಈ ದುರ್ಘಟನೆ ನಡೆದಿದ್ದು ರೈಲು ದುರಂತಕ್ಕೆ ಕಾರಣವಾಗಿದೆ. ಇದರ ಹಿಂದೆ ಆಗುಂತುಕರ ಕೈವಾಡವೂ ಇದೆ ಎಂಬುದು ತನಿಖೆಯಲ್ಲಿ ಬಯಲಾಗುತ್ತಿದೆ. ಈ ರೈಲು ದುರಂತದ ಚಿತ್ರ ಎಲ್ಲರಿಗೂ ಆತಂಕವನ್ನು ಹುಟ್ಟು ಹಾಕುವುದರಲ್ಲಿ ಅನುಮಾನವಿಲ್ಲ. ಆದರೆ ಸುಮಾರು 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆಯೇ ವಿನಹ ಯಾರಿಗೂ ಪ್ರಾಣಹಾನಿ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದಕ್ಕೆ ಕಾರಣ ಈ ರೈಲಿಗೆ ಅಳವಡಿಸಿದ್ದು ಎಲ್‌ಹೆಚ್‌ಬಿ ಕೋಚ್ ಗಳನ್ನು.

ಎಲ್‌ಹೆಚ್‌ಬಿ ಜರ್ಮನ್ ತಂತ್ರಜ್ಞಾನದಿಂದ ಅಳವಡಿಸಿದ ಬೋಗಿಗಳಾಗಿವೆ. ಇದರ ವಿಶೇಷತೆಗಳೆಂದರೆ ಯಾವುದೇ ರೈಲು ದುರಂತಗಳು ಸಂಭವಿಸಿದರು ಕೂಡ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಿ ಜನರ ಪ್ರಾಣ ಹಾನಿಯನ್ನು ತಪ್ಪಿಸುವ ವಿಶೇಷ ಸೌಲಭ್ಯವನ್ನು ಈ ಬೋಗಿಗಳು ಹೊಂದಿವೆ. ಸಾಮಾನ್ಯವಾಗಿ ಹಳೆಯ ಬೋಗಿಗಳನ್ನು ಒಳಗೊಂಡ ರೈಲುಗಳು ಅಪಘಾತ ಸಂಭವಿಸಿದಾಗ ಬೋಗಿಗಳ ಮೇಲೆ ಮತ್ತೊಂದು ಬೋಗಿಗಳು ಬಿದ್ದು ಪ್ರಾಣಹಾನಿಯಾಗಿದ್ದು ಮಾತ್ರವಲ್ಲದೆ ಬೋಗಿಗಳು ಸಂಪೂರ್ಣವಾಗಿ ಜಖಂಗೊಂಡಿರುವ ವಾರ್ತೆಗಳನ್ನು ಕೇಳಿದ್ದೇವೆ. ಆದರೆ ಈ ಬೋಗಿಗಳು ಯಾವುದೇ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅಂದರೆ ಬೋಗಿಯ ಮೇಲೆ ಮತ್ತೊಂದು ಬೋಗಿ ಬೀಳದೆ ರೈಲ್ವೆ ಹಳಿಯಲ್ಲಿ ಆಚೆ ಈಚೆ (zigzag) ಭಾಗವಾಗಿ ವರ್ಗೀಕರಿಸಿ ಜನರನ್ನು ಸುರಕ್ಷಿತವಾಗಿ ಉಳಿಯುವಂತೆ ಮಾಡುತ್ತದೆ.

ಮಾತ್ರವಲ್ಲದೆ ಈ ಬೋಗಿಗಳು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಓಡಾಟದ ಸಂದರ್ಭದಲ್ಲಿ ಹಳೆಯ ಬೋಗಿಗಳಿಂದ ಬರುತ್ತಿದ್ದ ಸದ್ದು ಈ ಬೋಗಿಗಳಲ್ಲಿ ಅಷ್ಟಾಗಿ ಕೇಳ ಸಿಗುವುದಿಲ್ಲ.

ಮತ್ತು ಈ ರೈಲುಗಳು ಘರ್ಷಣೆಯನ್ನು ಕಡಿಮೆ ಮಾಡುತ್ತವೆ. ಬ್ರೇಕ್ ಹಾಕುವ ಸಂದರ್ಭದಲ್ಲಿ ಅಥವಾ ಇನ್ನಾವುದೇ ಕ್ಷಣಗಳಲ್ಲಿ ಬೋಗಿಗಳ ನಡುವೆ ಘರ್ಷಿಸುವುದು ಕಡಿಮೆಯಾಗುತ್ತದೆ. ಈ ಮೂಲಕ ಅತಿಯಾದ ಶಬ್ದ ರಹಿತ ಮತ್ತು ಆರಾಮದಾಯಕ ಪ್ರಯಾಣವನ್ನು ಅನುಭವಿಸಬಹುದಾಗಿದೆ.

ಒಟ್ಟು ಹಲವಾರು ವಿಶೇಷ ತಂತ್ರಜ್ಞಾನಗಳನ್ನು ಹೊಂದಿರುವ ಈ ಎಲ್‌ಹೆಚ್‌ಬಿ ಬೋಗಿ ಇರುವ ರೈಲುಗಳು ಈ ಮೊದಲು ರಾಜಧಾನಿಗಳಲ್ಲಿ ಮಾತ್ರವೇ ಕಂಡುಬರುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ರೈಲ್ವೆ ಯೋಜನೆಯ ಪರಿಕಲ್ಪನೆಯ ಅಡಿಯಲ್ಲಿ ಸಾಮಾನ್ಯ ಪ್ರಯಾಣಿಕರಿಗೂ ಈ ಸೇವೆ ದೊರಕುವಂತಾಗಿದೆ. ಹೀಗಾಗಿ 27 ವರ್ಷಗಳಿಂದ ಹಳೆಯ ಬೋಗಿಗಳಲ್ಲೇ ಓಡಾಟ ನಡೆಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ಹೊಸ ಬೋಗಿಗಳನ್ನೊಳಗೊಂಡ ಸುಂದರ ಹಾಗೂ ವಿಶೇಷ ಅನುಭವ ನೀಡುವ ರೈಲಾಗಿ ಪರಿವರ್ತನೆ ಹೊಂದುತ್ತಿರುವುದು ನಮಗಿಲ್ಲರಿಗೂ ಸಂತೋಷದ ವಿಷಯವಾಗಿದೆ.

ನಾನು ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ.ಸೋಮಣ್ಣ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಫೆಬ್ರವರಿ 16ರ ನಂತರ ಈ ಹೊಸ ಅನುಭವವನ್ನು ನಮ್ಮ ಪ್ರಯಾಣಿಕರು ಪಡೆದುಕೊಳ್ಳಬಹುದಾಗಿ ಹರ್ಷದಿಂದ ಹೇಳಬಯಸುತ್ತೇನೆ ಎಂದು ತಿಳಿಸಿದರು.