ಫಲ್ಗುಣಿ ತಟದಲ್ಲೀಗ ಹಬ್ಬದ ಸಂಭ್ರಮ. 12 ವರ್ಷಗಳ ನಂತರ ಬಾಹುಬಲಿಗೆ ಮಹಾ ಮಜ್ಜನ ನಡೆಯುತ್ತಿದೆ. ಇಂದು ಸೇವಾಕರ್ತ ಪ್ರವೀಣ್ ಕುಮಾರ್ ಅವರಿಂದ ಮಧ್ಯಾಹ್ನ ಒಂದು ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಾಹುಬಲಿ ಸ್ವಾಮಿಗೆ ಪುಷ್ಪವೃಷ್ಟಿ ನೆರವೇರಲಿದೆ.
ವೇಣೂರು :
ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
12 ವರ್ಷದ ಬಳಿಕ ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ಹತ್ತಿ ಅಭಿಷೇಕ ಮಾಡುತ್ತಿದ್ದಾರೆ.
ಮಹಾಮಸ್ತಕಾಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ. ಮಾರ್ಚ್ 1ರವರೆಗೂ ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಲಿದೆ.
35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿ, ಫಲ್ಗುಣಿ ನದಿ ತೀರದ ಉತ್ತಾರಭಿಮುಖವಾಗಿ ನಿಂತಿದೆ. ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ಈ ಕ್ಷೇತ್ರದ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತ ಬಂದಿದ್ದು, ಅವರಿಗೆ ಪಟ್ಟಭಿಷೇಕವಾದ ಬಳಿಕ ಇದು ತೃತೀಯ ಮಹಾಮಸ್ತಕಾಭಿಷೇಕವಾಗಿದೆ.
1604 ರಲ್ಲಿ ಬಾಹುಬಲಿ ಬೆಟ್ಟದ ಮೇಲೆ ಪ್ರತಿಷ್ಠಾಪನೆಯಾದ ನಂತರ ಈ ಮಹಾಮಸ್ತಕಾಭಿಷೇಕ ನಡೆಯುತ್ತಿರುವುದು ಐದನೆಯದು.
ರಾಜ್ಯದ ಮೂರನೇ ಅತ್ಯಂತ ಹಳೆಯದಾದ 35 ಅಡಿ ಎತ್ತರದ ಬಾಹುಬಲಿ ಸ್ವಾಮಿ ಏಕಶಿಲಾ ಪ್ರತಿಮೆಗೆ ಮಹಾಮಸ್ತಕಾಭಿಷೇಕ ಫೆಬ್ರವರಿ 22 ಮತ್ತು ಮಾರ್ಚ್ 1 ರ ನಡುವೆ ವೇಣೂರಿನಲ್ಲಿ ನಡೆಯಲಿದೆ.
ಈ ಮಹಾಮಸ್ತಕಾಭಿಷೇಕವು 1604 ರಲ್ಲಿ ಫಲ್ಗುಣಿ ನದಿಯ ದಡದಲ್ಲಿರುವ ಬಾಹುಬಲಿ ಬೆಟ್ಟದ ಮೇಲೆ ಪ್ರತಿಷ್ಠಾಪನೆಯಾದ ನಂತರ ನಡೆಯಲಿರುವ ಐದನೆಯದು. ಮೊದಲ ಮಹಾಸ್ತಕಾಭಿಷೇಕ 1928 ರಲ್ಲಿ ನಡೆಯಿತು. ನಂತರ 1956, 2000 ಮತ್ತು 2012 ರಲ್ಲಿ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಪಟ್ಟಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಒಂಬತ್ತು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದಾರೆ.