ಸುಬ್ರಮಣ್ಯ : ಭಾರತ ಟಿ-20 ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಹಿರಿಮೆಗೆ ಪಾತ್ರವಾಗಿರುವ ಸೂರ್ಯಕುಮಾರ ಯಾದವ್ ಅವರು ತಮ್ಮ ಧರ್ಮಪತ್ನಿ ದೇವಿಶಾ ಶೆಟ್ಟಿ ಜೊತೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸೂರ್ಯಕುಮಾರ-ದೇವಿಶಾ ದಂಪತಿ, ಸುಬ್ರಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಮಣ್ಯ ಮಠದಲ್ಲಿ ಆಶ್ಲೇಷಾ ಬಲಿ ಸೇವೆ ಮತ್ತು ನಾಗ ಪ್ರತಿಷ್ಠಾಪನೆ ಪೂಜೆಯನ್ನು ನೆರವೇರಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ದಂಪತಿಯನ್ನು ಸುಬ್ರಮಣ್ಯ ದೇವಸ್ಥಾನದ ಮುಖ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಶಾಲು ಹೊದಿಸಿ ಗೌರವಿಸಿದರು.
ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ ಮತ್ತು ದೇವಸ್ಥಾನದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆಲ ತಿಂಗಳ ಹಿಂದೆ ದೇವಿಶಾ ಶೆಟ್ಟಿ ಅವರು ಸೂರ್ಯಕುಮಾರ ಯಾದವ್ ಅವರ ಜೊತೆ ತಮ್ಮ ತಾಯಿಯ ತವರು ಕಾಪುವಿನ ಮಾರಿಗುಡಿಗೆ ಕರೆದುಕೊಂಡು ಹೋಗಿ ಶ್ರೀ ಮಾರಿ ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಹರಕೆಯನ್ನು ನೆರವೇರಿಸಿದ್ದರು.
ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಮಂಗಳೂರು ಮೂಲದವರು, ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಜೊತೆ ಕಾಪು ಮಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು.
ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿದ್ದ ನೂರಾರು ಮಂದಿ ಭಕ್ತರು ಸೂರ್ಯಕುಮಾರ ಯಾದವ್ ಅವರ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದರು. ಧಾರ್ಮಿಕ ಕೆಲಸಗಳು ಮುಗಿದ ಬಳಿಕ ಸೂರ್ಯಕುಮಾರ ಯಾದವ್ ದಂಪತಿಯನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರ್ಚಕರು ನೀವು ಮುಂದಿನ ಬಾರಿ ಬರುವ ವೇಳೆಗೆ ಭಾರತ ತಂಡದ ನಾಯಕರಾಗಿರುತ್ತೀರಾ ಎಂದು ಭವಿಷ್ಯ ನುಡಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಸೂರ್ಯಕುಮಾರ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ಸೂರ್ಯ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಕೆಲವೇ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಈ ಸರಣಿ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ಪತ್ನಿ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಸೌತ್ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್‌ನಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ.
ಈ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಂಪ್ರದಾಯವನ್ನು ಮುಂದುವರೆಸಿದ್ದು ವಿಶೇಷವಾಗಿತ್ತು. ಅಂದರೆ ಟ್ರೋಫಿ ಗೆದ್ದ ಬಳಿಕ ಚೊಚ್ಚಲ ಸರಣಿ ಆಡಿದ ಆಟಗಾರರಿಗೆ ಕಪ್ ನೀಡುವ ವಿಶಿಷ್ಟ ಸಂಪ್ರದಾಯಕ್ಕೆ ಧೋನಿ ನಾಂದಿ ಹಾಡಿದ್ದರು.