ವಿಜಯಪುರ : ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಿರುಪಯುಕ್ತ ಕೊಳವೆ ಬಾವಿಗೆ 14 ತಿಂಗಳ ಮಗು ಸಾತ್ವಿಕ್ ಬಿದ್ದ ಘಟನೆಯನ್ನು ಇದೀಗ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ದೊಡ್ಡ ಅವಘಡಕ್ಕೂ ಮುನ್ನ ಮಗುವನ್ನು ರಕ್ಷಿಸಿರುವ ಬೆನ್ನಿಗೆ ಇದೀಗ ಮಗುವಿನ ಅಜ್ಜ ಶಂಕರಪ್ಪ ಮುಜುಗೊಂಡ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಅನುಮತಿ ಪಡೆಯದೆ ಕೊಳೆವೆಬಾವಿ ಕೊರೆಸಿದ್ದಲ್ಲದೆ ಅದು ನಿರುಪಯುಕ್ತವಾಗಿದ್ದರೂ ಮುಚ್ಚದೆ ಹಾಗೇ ಬಿಟ್ಟಿದ್ದರಿಂದ ಮಗು ಬಾವಿಗೆ ಬಿದ್ದಿತ್ತು. ಇನ್ನೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ ಹೊಲದ ಮಾಲಿಕ ಮತ್ತು ಕೊಳವೆ ಬಾವಿ ತೆರೆದ ಕಂಪನಿ(ಏಜೆನ್ಸಿ)ವಿರುದ್ಧ ದೂರು ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಅಕ್ರಮವಾಗಿ ಕೊಳವೆ ಬಾವಿ ಕೊರೆಸಿದ್ದರೂ ಗಮನಿಸದೆ ನಿರ್ಲಕ್ಷ್ಯ ವಹಿಸಿರುವ ಲಚ್ಯಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿ ಇತರ ಅಧಿಕಾರಿಗಳಿಗೂ ನೋಟಿಸ್ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.