Join The Telegram | Join The WhatsApp |
ನಾಗ್ಪುರ :
ಕರ್ನಾಟಕದ ಜೊತೆಗೆ ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರ, ಈಗ ಕೃಷ್ಣಾ ನದಿಗೆ ಕಟ್ಟಲಾಗಿರುವ ಆಲಮಟ್ಟಿ ಆಣೆಕಟ್ಟ ವಿಷಯವನ್ನೂ ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವ ಬೆದರಿಕೆ ಹಾಕಿದೆ.
ಈ ಕುರಿತು ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರವು ಪ್ರವಾಹದ ಪರಿಣಾಮದ ಕುರಿತು ನಡೆಸಲಾಗುತ್ತಿರುವ ಅಧ್ಯಯನವನ್ನು ಪೂರ್ಣಗೊಳಿಸುವ ವರೆಗೆ ಆಲಮಟ್ಟಿ ಜಲಾಶಯ ಎತ್ತರಿಸುವ ಕೆಲಸ ನಿಲ್ಲಿಸುವಂತೆ ಕರ್ನಾಟಕಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ಮಹಾರಾಷ್ಟ್ರದ ಮನವಿಗೆ ಕರ್ನಾಟಕ ಸ್ಪಂದಿಸದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸುವುದರಿಂದ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಮೇಲೆ ಆಗುವ ಪರಿಣಾಮಗಳ ಅಧ್ಯಯನಕ್ಕೆ ನಂದಕುಮಾರ ವದೆರ್ನಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2020ರಲ್ಲಿ ವರದಿ ಸಲ್ಲಿಸಿದ್ದ ಸಮಿತಿಯು ಆಣೆಕಟ್ಟು ಎತ್ತರದಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿತ್ತು. ಆದರೆ 2021ರಲ್ಲಿ ಸಮಿತಿಯ ಅಧ್ಯಕ್ಷ ವದೆರ್ನಾ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು, ಕರ್ನಾಟಕ ಸರ್ಕಾರ ಚೆಕ್‌ಡ್ಯಾಮ್ ಕಟ್ಟುವ ವಿಷಯ ಸಮಿತಿಗೆ ಗೊತ್ತಿರಲಿಲ್ಲ. ಒಂದು ವೇಳೆ ಚೆಕ್‌ಡ್ಯಾಂ ನಿರ್ಮಾಣವಾದರೆ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಹೀಗಾಗಿ ಹೊಸದಾಗಿ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ. ಆ ಸಮಿತಿ ವರದಿ ನೀಡುವವರೆಗೂ ಕರ್ನಾಟಕ ಸರ್ಕಾರ ಆಣೆಕಟ್ಟಿನ ಎತ್ತರ ಹೆಚ್ಚಿಸುವ ಕಾಮಗಾರಿ ಸ್ಥಗಿತ ಮಾಡಬೇಕು. ಇಲ್ಲದೆ ಹೋದಲ್ಲಿ ಈ ಬಗ್ಗೆ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಫಡ್ನವೀಸ್ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.
Join The Telegram | Join The WhatsApp |