ಬ್ರಿಡ್ಜ್ ಟೌನ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕವನ್ನು ಏಳು ರನ್ ಗಳಿಂದ ಸದೆಬಡಿದ ಬೆನ್ನಲ್ಲೇ ಈ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದ ವಿರಾಟ್ ಕೊಹ್ಲಿ ಮೊದಲು ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಅವರು ಅಂತರಾಷ್ಟ್ರೀಯ ಟಿ ಟ್ವೆಂಟಿಗೆ ನಿವೃತ್ತಿ ಪ್ರಕಟಿಸಿದರು.
ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ವಿಶ್ವಕಪ್ ಪಂದ್ಯಾವಳಿಯಲ್ಲಿ 15 ವಿಕೆಟ್ ಪಡೆದುಕೊಂಡು ನಿಖರ ಬೌಲಿಂಗ್ ಸಂಘಟಿಸಿದ ಜಸ್ಪ್ರೀತ್ ಬೂಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರೋಹಿತ್ ಶರ್ಮಾ ಮಾತನಾಡಿ, ನಾನು ಈ ಮಾದರಿ ಕ್ರಿಕೆಟ್ ನಲ್ಲಿ ಏನೂ ಸಾಧಿಸಬೇಕು ಎಂದುಕೊಂಡಿದ್ದೇನೋ ಅದನ್ನು ಸಾಧಿಸಿರುವೆ. ಈಗ ನಿವೃತ್ತಿಯ ಸಮಯ. ಇದು ನನ್ನ ಕೊನೆಯ ಟಿ20 ಕ್ರಿಕೆಟ್ ಪಂದ್ಯ. ವಿದಾಯಕ್ಕೆ ಇದಕ್ಕಿಂತ ಉತ್ತಮ ಸಮಯ ಸಿಗುವುದಿಲ್ಲ. ನಾವು ಈ ಟ್ರೋಫಿ ಗೆಲ್ಲುವುದು ಅತ್ಯಂತ ಅವಶ್ಯಕ ಅಸಾಧ್ಯ. ಯಾವುದನ್ನು ನಾನು ಬಯಸಿದ್ದೇನೋ ಅದು ಆಗಿದೆ. ನನ್ನ ಜೀವನದಲ್ಲಿ ನಾಯಕನಾಗಿ ಐಸಿಸಿ ಟ್ರೋಫಿ ಗೆಲ್ಲದೆ ತುಂಬಾ ಹತಾಶನಾಗಿದ್ದೆ. ನಾವು ಈ ಬಾರಿ ಆ ಗೆರೆಯನ್ನು ದಾಟಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದರು.

ರೋಹಿತ್ ಶರ್ಮಾ 159 ಟಿ20 ಕ್ರಿಕೆಟ್ ಪಂದ್ಯ ಆಡಿದ್ದು 4231 ಕಲೆ ಹಾಕಿದ್ದಾರೆ. ಐದು ಶತಕ 32 ಅರ್ಧಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 125 t20 ಪಂದ್ಯ ಆಡಿದ್ದು 4188 ಗಳಿಸಿದ್ದಾರೆ. 48.69 ಸರಾಸರಿಯಲ್ಲಿ ಅವರು ರನ್ ಗಳಿಸಿದ್ದು 122 ಅವರ ಅತ್ಯಧಿಕ ಮೊತ್ತ. ಏಕೈಕ ಶತಕ ಸಾಧನೆ ಮಾಡಿದ್ದಾರೆ.

ಕ್ರಿಕೆಟ್ ಲೋಕದ ಗೋಡೆ ಎಂದೇ ಖ್ಯಾತಿ ಪಡೆದಿರುವ ರಾಹುಲ್ ದ್ರಾವಿಡ್ ಅವರಿಗೆ ಈ ವಿಶ್ವಕಪ್ ಅತ್ಯಂತ ವಿಶೇಷವಾಗಿದೆ. 2007ರಲ್ಲಿ ಕೆರೆಬಿಯನ್ ನಾಡಿನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ್ದು ಆಗ ದ್ರಾವಿಡ್ ನಾಯಕರಾಗಿದ್ದರು. ಇದೀಗ ಅವರ ಮಾರ್ಗದರ್ಶನದಲ್ಲಿ ಭಾರತ ಕೆರಿಬಿಯನ್ ನೆಲದಲ್ಲಿ ಟಿ20 ಪ್ರಶಸ್ತಿ ಜಯಿಸಿದೆ. ಈ ಗೆಲುವಿನೊಂದಿಗೆ ರಾಹುಲ್ ತಮ್ಮಕೋಚ್ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ದ್ರಾವಿಡ್ ಅವರಿಗೆ ಕೋಚ್ ನೀಡಲಾಗಿತ್ತು. ಶಿಸ್ತಿನ ಕೋಚ್ ಎಂದೇ ಅವರು ಹೆಸರುವಾಸಿಯಾಗಿದ್ದರು.

ಕಪಿಲ್, ಧೋನಿ ಸಾಲಿಗೆ ರೋಹಿತ್ :
ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಬಳಿಕ ಐಸಿಸಿ ವಿಶ್ವಕಪ್ ಗೆದ್ದ ಮೂರನೇ ನಾಯಕ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 1983 ರಲ್ಲಿ ಕಪಿಲ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಚೊಚ್ಚಲ ಟಿ 20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿತ್ತು ಇದೀಗ 17 ವರ್ಷಗಳ ಬಳಿಕ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಟಿ 20 ಜಯಗಳಿಸಿದೆ.

ವಿಶ್ವಕಪ್‌ ನ ಈ ಸಲದ ಪಂದ್ಯಾವಳಿಯಲ್ಲಿ ಸತತ ಎಂಟು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಅಜೇಯ ತಂಡವಾಗಿ ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.

ಟಿ20 ವಿಶ್ವಕಪ್ ನಲ್ಲಿ ವಿಜೇತ ಭಾರತ ತಂಡ 10.3 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ. ಸೋಲು ಅನುಭವಿಸಿದ ದಕ್ಷಿಣ ಆಫ್ರಿಕಾ 10.6 ಕೋಟಿ ಬಹುಮಾನ ಪಡೆದುಕೊಂಡಿದೆ.