ಕಾರ್ಕಳ : ಇಂದು ಸಾಮಾಜಿಕ ಜಾಲತಾಣಗಳು ಪ್ರತಿದಿನ ಹೊಸ ಹೊಸ ವಿಷಯಗಳನ್ನು ಹೊತ್ತು ತರುತ್ತಿವೆ. ಜೊತೆಗೆ ಅನೇಕರನ್ನು ಮತ್ತೆ ಪುನರ್ಮಿಲನ ಮಾಡಲು ಕಾರಣವಾಗಿವೆ.
ಇದೊಂದು ತುಳುನಾಡಿನ ದೈವಗಳ ಪವಾಡ. ಸಾಮಾಜಿಕ ಜಾಲತಾಣಗಳ ಮಹಿಮೆ. 28 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಹೆತ್ತವರನ್ನು, ಊರನ್ನು ತ್ಯಜಿಸಿದ್ದ ಮಗ ಮತ್ತೆ ಮನೆಗೆ ಮರಳಿ ಬಂದ ಕತೆ ಇದು.
ಹೆಬ್ರಿ ತಾಲೂಕಿನ ವರಂಗ ಗ್ರಾಮದ ಹೊಸಬೆಟ್ಟು ಎಂಬಲ್ಲಿ. ಇಲ್ಲಿನ ಸುಮಾರು 6 ದಶಕಗಳಿಂದ ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ (80) ಅವರ ಮಗ ಭೋಜ 28 ವರ್ಷಗಳ ನಂತರ ಮರಳಿ ಮನೆಗೆ ಬಂದಿದ್ದಾರೆ.
ಅಂದು ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗನ ಬಗ್ಗೆ ಸುಂದರ ಪೂಜಾರಿ ಮತ್ತವರ ಪತ್ನಿ ಸುಶೀಲ ನಿತ್ಯವೂ ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದರು.
ಆದರೆ ಮಗ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಎಂದು ಬರುತ್ತಾನೆ ಎಂಬ ಸುಳಿವೇ ಇಲ್ಲದಾಗ ಕೊನೆಯ ಕಾಲದಲ್ಲಿಯಾದರೂ ಮಗನನ್ನು ಒಮ್ಮೆ ನೋಡಿ ಕಣ್ಣು ಮುಚ್ಚುತ್ತೇವೆ ಎಂದು ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು.
ದೈವವು ವರ್ಷದೊಳಗೆ ಮಗನ ಮುಖ ನೋಡುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು.
ಉಡುಪಿ ಕಂಡೀರಾ ಖ್ಯಾತಿಯ ಮಂಜುನಾಥ ಕಾಮತ್ ಅವರು, ಈ ಹೆತ್ತವರ ಇಳಿವಯಸ್ಸಿನ ನೋವನ್ನು ಫೇಸ್ಬುಕ್ -ಯೂಟ್ಯೂಬ್
ನಲ್ಲಿ ಹಂಚಿಕೊಂಡಿದ್ದರು.ವೃದ್ಧ ದಂಪತಿಗಳ ಕಣ್ಣೀರನ್ನು ನೋಡಿದ ಹುಬ್ಬಳ್ಳಿಯಲ್ಲಿ ತನ್ನ ಪಾಡಿಗೆ ತಾನು ಹೊಟೇಲ್ ಕಾರ್ಮಿಕನಾಗಿದ್ದ ಭೋಜ ಅವರ ಮನ ಕರಗಿತು. ಹೊರಟು ಊರಿಗೆ ಬಂದರು, ಹೆತ್ತವರ ಕಾಲಿಗೆ ಬಿದ್ದರು. ಬಾಲ್ಯದಿಂದಲೇ ಮಗನ ಕೈಯ ಮೇಲಿನ ಗುಳ್ಳೆಯನ್ನು ನೋಡಿ ಆತನೇ ತಮ್ಮ ಮಗ ಎಂದು ಖಚಿತಪಟ್ಟುಕೊಂಡು ಸುಂದರ ಪೂಜಾರಿ ದೈವಕ್ಕೆ ಬಾರಿಬಾರಿ ಕೈ ಮುಗಿದರು. ಆ ದಿನ ಮನೆಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ.
ಇದಾಗಿ ನಾಲೈದು ದಿನಗಳ ಭೋಜ ಮತ್ತೆ ಹುಬ್ಬಳ್ಳಿಗೆ ತೆರಳಿದರು. ವಾರ ಕಳೆಯುವಷ್ಟರಲ್ಲಿ ಮಗನನ್ನು ಕೊನೆ ಬಾರಿ ನೋಡುವುದಕ್ಕಾಗಿಯೇ ಕಾಯುತ್ತಿದ್ದವರಂತೆ ತಾಯಿ ಸುಶೀಲ ಅನಾರೋಗ್ಯ ಹಾಸಿಗೆ ಹಿಡಿದು ಎರಡು ವಾರಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಮತ್ತೆ ಬಂದ ಭೋಜ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ್ದಾರೆ.