ಬೆಂಗಳೂರು : ಮತಗಟ್ಟೆ ಸಮೀಕ್ಷೆ ಬಹಿರಂಗಗೊಂಡ ನಂತರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಮತ್ತೆ ಕಮಲ ಪಕ್ಷವನ್ನು ಬೆಂಬಲಿಸಿರುವುದು ಸ್ಪಷ್ಟವಾಗಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಕಾರಣಕ್ಕೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಆದರೆ ಒಂದು ವರ್ಷದ ಅವಧಿಯಲ್ಲಿ ಇದೀಗ ಮತ್ತೆ ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಶೇಕಡಾ 80% ರಷ್ಟು ಲಿಂಗಾಯತರು ಇದೀಗ ಬಿಜೆಪಿ ಬೆಂಬಲಕ್ಕೆ ಬಂದಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆಗಿನ ಮೈತ್ರಿ ಕಾರಣಕ್ಕೆ ಶೇಕಡಾ 70ರಷ್ಟು ಒಕ್ಕಲಿಗರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಶೇ. 24 ರಷ್ಟು ಒಕ್ಕಲಿಗರು ಕಾಂಗ್ರೆಸ್ ಅನ್ನು ಬೆಂಬಲಿಸಿರುವುದು ಕಂಡುಬಂದಿದೆ.
ಕರ್ನಾಟಕದಲ್ಲಿ ಮೂರನೇ ಅತಿ ದೊಡ್ಡ ಸಮುದಾಯವಾಗಿರುವ ಕುರುಬರು ಸಹಾ ಬಿಜೆಪಿ ಬೆಂಬಲಕ್ಕೆ ಬಂದಿರುವುದು ಗಮನಾರ್ಹ.
ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಕುರುಬ ಮತಗಳು ಒಂದೇ ಅಂತರದಲ್ಲಿ ಸಿಕ್ಕಿರುವುದು ವಿಶೇಷವಾಗಿದೆ.
ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಮತಗಳು ಸಹ ಬಿಜೆಪಿ ಪಾಲಿಗೆ ಧಾರಾಳವಾಗಿ ಹರಿದು ಬಂದಿದೆ.
ಆದರೆ, ಮುಸ್ಲಿಂ ಬಾಂಧವರು ಒಟ್ಟಾರೆಯಾಗಿ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಬೆಂಬಲಿಸಿದ್ದಾರೆ.
ಮುಸ್ಲಿಂ ಸಮುದಾಯದ ಮತ ಸೂರೆಗೈದ ಇಂಡಿಯಾ ಒಕ್ಕೂಟ :
ಇಡೀ ದೇಶದಲ್ಲಿ ಹೇಳುವುದಾದರೆ ಈ ಬಾರಿ ಮುಸ್ಲಿಂ ಮತಗಳು ಬಿಜೆಪಿ ಪರವಾಗಿ ಬಂದಿಲ್ಲ. ಶೇ. 72 ರಷ್ಟು ಮುಸ್ಲಿಂ ಬಾಂಧವರು ಬಿಜೆಪಿ ವಿರುದ್ಧವಾಗಿ ಮತ ಹಾಕಿದ್ದಾರೆ. ಬಿಜೆಪಿಯ ಜತೆ ಸೈದ್ಧಾಂತಿಕ ವಿರೋಧ ಇಟ್ಟುಕೊಂಡಿರುವ ಭಾರತದ ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಕ್ಕಾಗಿ ಒಟ್ಟಾಗಿ ‘ಕೈ’ ಜೋಡಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ನೇತೃತ್ವದ ಎನ್ಡಿಎಯನ್ನು ಅಧಿಕಾರದಿಂದ ದೂರವಿರಿಸಿ ತಮಗೆ ಹೆಚ್ಚು ಅನುಕೂಲಕರ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿರುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಪ್ರಕಟಗೊಂಡಿದೆ.
ಸಮೀಕ್ಷೆಯು ಅಂದಾಜಿಸಿದ ಪ್ರಕಾರ ಮುಸ್ಲಿಂ ಸಮುದಾಯದವರು ಚಲಾವಣೆ ಮಾಡಿರುವ ಶೇಕಡಾ 72ರಷ್ಟು ಮತಗಳು ಕೈ ಪಕ್ಷದ ಪಾಲಾಗಿವೆ.
ಉತ್ತರ ಪ್ರದೇಶದ ಫರೂಕಾಬಾದ್ನ್ಲಲಿ ಏಪ್ರಿಲ್ 29ರಂದು ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ “ವೋಟ್ ಜಿಹಾದ್” ಮಾಡಿ ಎಂದು ಭಾರತದ ಮುಸ್ಲಿಂ ಮತದಾರರಿಗೆ ಕರೆ ಕೊಟ್ಟಿದ್ದರು. ಇಂಥ ಹೇಳಿಕೆಗಳು ಮತ್ತು ಸ್ಥಳೀಯವಾಗಿ ಮುಸ್ಲಿ ಸಮುದಾಯದ ಮಂದಿ ಪಠಿಸಿದ ಒಗ್ಗಟ್ಟಿನ ಮಂತ್ರ ಕಾಂಗ್ರೆಸ್ಗೆ ಅವರ ಮತಗಳು ಪರಿವರ್ತನೆಗೊಳ್ಳುವಂತೆ ಮಾಡಿದೆ.
ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕನ್ನು ಹೊಂದಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 2006ರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದನ್ನು ಈ ವೇಳೆ ಸ್ಮರಿಸಬಹುದು. ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಒಬಿಸಿಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೀಸಲನ್ನು ಕಸಿದು ಮುಸ್ಲಿಮರಿಗೆ ನೀಡಲಿದೆ ಎಂದು ಪ್ರಧಾನಿ ಆರೋಪಿಸಿದ್ದರು. ಮೋದಿ ಅವರಿಗೆ ಮುಸ್ಲಿಮರು ಕಾಂಗ್ರೆಸ್ಗಾಗಿ ಒಟ್ಟಾಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಅದಕ್ಕಾಗಿಯೇ ಅವರು ಹಿಂದೂ ಮತಗಳ ಧ್ರುವೀಕರಣಕ್ಕೆ ತಂತ್ರ ಹೆಣೆದಿದ್ದರು.
ಮುಸ್ಲಿಮರು ಏಕೆ ಚುನಾವಣೆಯಲ್ಲಿ ಮುಖ್ಯವಾಗಿದ್ದರು?
ಭಾರತವು ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿದ ರಾಷ್ಟ್ರ. ಇದು ದೇಶವೊಂದರ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯ. ಮುಸ್ಲಿಮರು ಭಾರತದ ಜನಸಂಖ್ಯೆಯ ಶೇಕಡಾ 14ರಷ್ಟಿದ್ದಾರೆ. ಭಾರತದ 543 ಲೋಕಸಭಾ ಕ್ಷೇತ್ರಗಳ ಪೈಕಿ 86ರಲ್ಲಿ ಮುಸ್ಲಿಮರ ಜನಸಂಖ್ಯೆ ಕನಿಷ್ಠ ಶೇ.20ರಷ್ಟಿದೆ. ಇದರಲ್ಲಿ 16 ಸ್ಥಾನಗಳಲ್ಲಿ, ಜನಸಂಖ್ಯೆಯಲ್ಲಿ ಆ ಪಾಲು ಶೇಕಡಾ 50ಕ್ಕಿಂತ ಹೆಚ್ಚಾಗಿದೆ. ಈ 86 ಸ್ಥಾನಗಳು 12 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಇವೆ. ಇದರಲ್ಲಿ 71 ಸ್ಥಾನಗಳು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಬಿಹಾರ, ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹರಡಿದೆ.