ನವದೆಹಲಿ: ಮಾಲ್ದೀವ್ಸ್‌ನೊಂದಿಗಿನ ಭಾರತದ ಬಾಂಧವ್ಯ ಹಳಸಿದ ಬೆನ್ನಲ್ಲೇ, ಲಕ್ಷದ್ವೀಪದತ್ತ ಮುಖ ಮಾಡಿರುವ ಪ್ರವಾಸಿಗರ ಸೆಳೆಯಲು ಇಂಡಿಗೊ ವಿಮಾನಯಾನ ಸಂಸ್ಥೆಯು, ಬೆಂಗಳೂರು ಹಾಗೂ ಅಗಟ್ಟಿ ನಡುವೆ ನೇರ ವಿಮಾನಯಾನವನ್ನು ಮಾರ್ಚ್ 31ರಿಂದ ಆರಂಭಿಸುವುದಾಗಿ ಸೋಮವಾರ ಹೇಳಿದೆ.

ಇಂಡಿಗೊ ವಿಮಾನಯಾನದ ಒಟ್ಟು 121 ಸಂಪರ್ಕ ತಾಣದಲ್ಲಿ ಅಗಟ್ಟಿ ದೇಶೀಯ ನೆಲದಲ್ಲಿ 88ನೇ ತಾಣವಾಗಿದೆ. ಲಕ್ಷದ್ವೀಪ ಪ್ರಯಾಣಕ್ಕೆ ಎಟಿಆರ್ ವಿಮಾನವನ್ನು ಇಂಡಿಗೊ ಬಳಸುತ್ತಿದೆ. ಇದರಲ್ಲಿ 78 ಆಸನಗಳು ಇರಲಿವೆ.

ಸಮುದ್ರದಾಳದ ಮೀನುಗಾರಿಕೆ, ಸ್ಕೂಬಾ ಡೈವಿಂಗ್‌, ದೋಣಿಯಾನ, ಸ್ಕೀಯಿಂಗ್‌ ಮತ್ತು ಕಯಾಕಿಂಗ್‌ಗೆ ಅಗಟ್ಟಿ ಪ್ರಮುಖ ತಾಣವಾಗಿದೆ ಎಂದು ಇಂಡಿಗೊ ಹೇಳಿದೆ.

‘ಈ ದ್ವೀಪವು ಕೇಂದ್ರ ಪ್ರದೇಶವಾಗಿದ್ದು, ಇಲ್ಲಿಂದ ಸುತ್ತಲಿನ ಬಂಗಾರಂ, ಪಿಟ್ಟಿ, ತಿನ್ನಕಾರಾ, ಪರಲಿ–1 ಹಾಗೂ ಪರಲಿ–2 ತಾಣಗಳು ಸಮೀಪದಲ್ಲಿವೆ’ ಎಂದು ಹೇಳಿದೆ.

ವಿಮಾನಯಾನದಲ್ಲಿ ಅಗಟ್ಟಿಗೆ ಸದ್ಯ ಅಲಯನ್ಸ್ ಏರ್ ಮಾತ್ರ ಇದ್ದು, ಏಪ್ರಿಲ್‌ನಿಂದ ಎಫ್‌ಎಲ್‌ವೈ91 ಕೂಡಾ ಹಾರಾಟ ಆರಂಭಿಸುವ ಸಾಧ್ಯತೆ ಇದೆ.