ಪುರಿ: ಒಡಿಶಾದ ಪುರಿ ಜಗನ್ನಾಥ ದೇವಾಲಯ ಪ್ರವೇಶಿಸಲು ಭಕ್ತರಿಗೆ ಎಲ್ಲಾ ನಾಲ್ಕು ಬಾಗಿಲುಗಳನ್ನು ಇಂದು (ಗುರುವಾರ) ತೆರೆಯಲಾಗಿದೆ.
ನೂತನ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಸಚಿವರು, ಪುರಿ ಸಂಸದ ಸಂಬಿತ್ ಪಾತ್ರ, ಬಾಲಸೋರ್ ಸಂಸದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಇತರ ನಾಯಕರು ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಝಿ ಅವರು ಬುಧವಾರ ಮೊದಲ ಸಂಪುಟ ಸಭೆ ನಡೆಸಿದರು. ಈ ವೇಳೆ ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಮುಚ್ಚಿದ್ದ ಜಗನ್ನಾಥ ದೇಗುಲದ ದ್ವಾರಗಳನ್ನು ಭಕ್ತರಿಗಾಗಿ ಮತ್ತೆ ತೆರೆಯುವ ಪ್ರಸ್ತಾಪವನ್ನು ಅನುಮೋದಿಸಿದ್ದರು.
ಚುನಾವಣೆ ಸಮಯದಲ್ಲಿ, ಜಗನ್ನಾಥ ದೇಗುಲದ ಎಲ್ಲಾ 4 ದ್ವಾರಗಳನ್ನು ಮತ್ತೆ ತೆರೆಯುತ್ತೇವೆ ಎಂದು ಹೇಳಿದ್ದೆವು. ಇಂದು ದೇವಾಲಯದ ಎಲ್ಲಾ ನಾಲ್ಕು ದ್ವಾರಗಳು ತೆರೆದಿವೆ. ಪರಿಷತ್ತಿನ ಎಲ್ಲಾ ಸದಸ್ಯರು ಇಲ್ಲಿ ಇದ್ದಾರೆ. ಸಿಎಂ ಕೂಡ ಇದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ₹500 ಕೋಟಿ ಮೌಲ್ಯದ ಕಾರ್ಪಸ್ ನಿಧಿಯನ್ನೂ ಘೋಷಿಸಲಾಗಿದೆ.
ನಾವು ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಇಂದು ದೇಗುಲದ ಬಾಗಿಲು ತೆರೆಯುತ್ತಿದ್ದೇವೆ’ ಎಂದು ಒಡಿಶಾದ ನೂತನ ಸಚಿವ ಸೂರ್ಯಬಂಶಿ ಸೂರಜ್ ಎಎನ್ಐಗೆ ತಿಳಿಸಿದ್ದಾರೆ.
ಸಿಂಹ ದ್ವಾರ, ಅಶ್ವ ದ್ವಾರ, ವ್ಯಾಗ್ರ ದ್ವಾರ, ಹಸ್ತಿ ದ್ವಾರ ಇವೇ ನಾಲ್ಕು ದೇಗುಲದ ದ್ವಾರಗಳಾಗಿವೆ.
ಈ ವರೆಗೆ ಸಿಂಹದ್ವಾರದ ಮೂಲಕ ಮಾತ್ರ ದೇವಾಲಯದ ಒಳಗೆ ಪ್ರವೇಶಿಸಲು ಭಕ್ತರಿಗೆ ಅವಕಾಶವಿತ್ತು. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕಾರಣ ನೂಕುನುಗ್ಗಲು ಉಂಟಾಗುತ್ತಿತ್ತು.