ಬೆಂಗಳೂರು :
ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಮೇ 7ರಂದು ಮತದಾನ ನಡೆಯಲಿದ್ದು, ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕಿದೆ. ಸೋಮವಾರ ಬೆಳಗ್ಗೆ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಗುರುತಿಸಲ್ಪಟ್ಟ ಸ್ಥಳಗಳಿಂದ ಮತದಾನಕ್ಕೆ ಪೂರಕ ಸಾಮಗ್ರಿಗಳನ್ನು ನಿರ್ದಿಷ್ಟಪಡಿಸಿದ ಮತಗಟ್ಟೆಗಳಿಗೆ ಕೊಂಡೊಯ್ಯಲಿದ್ದಾರೆ.

ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳಲ್ಲಿ ಜ್ಯೂಸ್, ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಿದೆ.

ಮದ್ಯ ಮಾರಾಟಕ್ಕೆ ನಿಷೇಧ: ಮತದಾನದ ಅವಧಿ ಮುಗಿಯುವವರೆಗೆ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಬೇರೆ ರಾಜ್ಯಗಳಿಂದಲೂ ಮದ್ಯ ತರುವಂತಿಲ್ಲ. ಕರ್ನಾಟಕ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.