ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಆರಂಭವಾಗಿದೆ. ಇಂದು (25-11-2024) ಕಟೀಲು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಪಾಂಡವಾಶ್ವಮೇಧ ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಕಟೀಲು ಮೇಳದ ಕಲಾವಿದರು ದಿಗ್ವಿಜಯಕ್ಕೆ ಹೊರಡಲಿದ್ದಾರೆ.
ಕಟೀಲು ಮೇಳಗಳ ಆಟವೆಂದರೆ ಜನರಿಗೆ ಒಂದು ರೀತಿಯ ಹಬ್ಬದ ಸಂಭ್ರಮ. ಅಲ್ಲಿ ಉತ್ಸವದ ವಾತಾವರಣವಿರುತ್ತದೆ. ತಮ್ಮೂರಿನ ಜಾತ್ರೆಯ ಹಾಗೆ. ಸ್ವತಃ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯವೇ ತಮ್ಮ ಊರಿಗೆ ಆಗಮಿಸುತ್ತಿರುವ ಹಾಗೆ ಪುಳಕವನ್ನು ಅನುಭವಿಸುತ್ತಾರೆ.
ಸಮಾಜದ ಎಲ್ಲಾ ವರ್ಗದ ಭಕ್ತ, ಬಾಂಧವ ಮಹನೀಯರಿಗೂ, ಕಟೀಲಿನ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಆದುದರಿಂದ ಕಟೀಲು ಮೇಳದ ಆಟ ನಡೆಯುವ ಸ್ಥಳಕ್ಕೆ ಆ ಊರಿನ ಪ್ರತಿಯೊಬ್ಬ ಆಸ್ತಿಕ ಬಂಧುಗಳ ಮನೆಯ ಸದಸ್ಯರೂ ತಪ್ಪದೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತಾದರೂ ಯಕ್ಷಗಾನ ಪ್ರದರ್ಶನ ನೋಡಿ ಆಮೇಲೆ ಮನೆಗೆ ಹಿಂತಿರುಗುತ್ತಾರೆ.
ಅಂತೂ ಕಲಾಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದ ದಿನಗಳು ಬಂದಾಗಿದೆ. ಧರ್ಮಸ್ಥಳ ಸಹಿತ ಇತರ ಕೆಲವು ಮೇಳಗಳು ಪ್ರದರ್ಶನಗಳನ್ನು ಈಗಾಗಲೇ ಆರಂಭಿಸಿವೆ. ಕಟೀಲು ಮೇಳಗಳು ತಿರುಗಾಟಕ್ಕೆ ಹೊರಟು ನಿಂತಿವೆ. ಕೆಲವು ದಿನಗಳಿಂದ ಕಾಯುತ್ತಿದ್ದ ಆಟದ ಸಂಭ್ರಮದ ವಾತಾವರಣದ ಆಸ್ವಾದನೆಗೆ ಸಮಯ ಒದಗಿ ಬಂದಿದೆ.
ಮಳೆಗಾಲದ ಭೋರ್ಗರೆತದ ನಡುವೆ ಭಾಗಶಃ ಮೌನವಾಗಿದ್ದ ಯಕ್ಷಗಾನ ಜಗತ್ತು ಮತ್ತೆ ಚೆಂಡೆಯ ಸದ್ದಿನ ಪುಳಕದೊಂದಿಗೆ ಎಚ್ಛೆತ್ತುಕೊಳ್ಳಲಿದೆ. ಮಣ್ಣಿನ ಮಕ್ಕಳ ಸಂಭ್ರಮದ ನಿಶೆಯ ಓಡಾಟದಿಂದ ಪುಳಕಿತವಾಗುತ್ತಿದ್ದ ಮೈದಾನಗಳು ಮತ್ತು ಗದ್ದೆಗಳಲ್ಲಿ ಮತ್ತೆ ಕಲೆಯ ಕಂಪು ಪಸರಿಸಲಿದೆ. ರಂಗಸ್ಥಳಗಳು ಕಲಾವಿದರ ಹುಮ್ಮಸ್ಸಿನಿಂದ ದೂಳೆಬ್ಬಿಸಲಿದೆ.
ಈ ಬಾರಿಯ ಯಕ್ಷಗಾನ ತಿರುಗಾಟ, ಪ್ರದರ್ಶನಗಳು ಉತ್ಸಾಹ, ಸಂಭ್ರಮಗಳಿಂದ ಎಲ್ಲ ಮೇಳಗಳಿಗೂ, ಎಲ್ಲ ಕಲಾವಿದರಿಗೂ, ಎಲ್ಲಾ ಜನರಿಗೂ ಸ್ಮರಣೀಯವಾಗಲಿ ಎಂದು ಆಶಿಸುತ್ತೇವೆ.
ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆ :
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಮಾಂಕಿತ ಕಟೀಲು ಮೇಳಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾ ತಂಡಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಯಾತ್ರಾ ಸ್ಥಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದೆ ಈ ಯಕ್ಷಗಾನ ತಂಡಗಳು. ಕಟೀಲು ಮೇಳವು ಒಟ್ಟು ಆರು ತಂಡಗಳನ್ನು ಹೊಂದಿದ್ದು ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು 150 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಟೀಲು ಮೇಳ 1975 ನೇ ಇಸವಿಯಲಿ ವ್ಯವಸ್ಥಿತ ಎರಡನೇ ಮೇಳವನ್ನು ಪ್ರಾರಂಭಿಸಿತು. 1982 ರಲ್ಲಿ ಮೂರನೇ ಮೇಳ, 1993 ರಲ್ಲಿ ನಾಲ್ಕನೇ ಮೇಳ, 2010 ರಲ್ಲಿ ಐದನೇ ಮೇಳ, 2013 ರಲ್ಲಿ ಆರನೇ ಮೇಳ ಪ್ರಾರಂಭಿಸಿತ್ತು. ಕಟೀಲು ಮೇಳಕ್ಕೆ ದಿನವೊಂದಕ್ಕೆ 4-5 ಹರಕೆಯಾಟಗಳ ಬುಕ್ಕಿಂಗ್ ನಡೆಯುತ್ತದೆ. ಕಟೀಲು ಮೇಳದಿಂದ ನಡೆಯುವ ಯಕ್ಷಗಾನ ಪ್ರದರ್ಶನದ ಉದ್ದೇಶ ಧನ ಸಂಪಾದನೆಯಾಗಿರದೆ, ಕರಾವಳಿ ಭಾಗದ ಆರಾಧನಾ ಕಲೆಯಾಗಿ ಪೌರಾಣಿಕ ಕಥಾನಕಗಳು ಪ್ರದರ್ಶನಗೊಳ್ಳುತ್ತವೆ.
ಸರ್ವಾಭೀಷ್ಟ ಸಿದ್ಧಿಗಾಗಿ ಆಟ ಆಡಿಸುವ ಭಕ್ತರು ಇದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಹಣ ಸಂಗ್ರಹಿಸಿ ಆಟ ಆಡಿಸುವ ಭಕ್ತರೂ ಇದ್ದಾರೆ. ಅಷ್ಟೆ ಅಲ್ಲದೆ ಇ೦ತಿಸ್ಟು ಆಟಗಳನ್ನು ನೋಡುತ್ತೆವೆ ಎಂದು ಹರಕೆ ಹೆಳುವ ಭಕ್ತರೂ ಇದ್ದಾರೆ. ಮುಸ್ಲಿಂ, ಕ್ರೈಸ್ತರೂ ಹರಿಕೆ ಆಟ ಆಡಿಸುತ್ತಾರೆ. ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯುವಾಗ ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆಯಿದೆ.
ಶ್ರೀ ದೇವಿ ಮಹಾತ್ಮೆ ಶ್ರೀ ದೇವೀ ಲಲಿತೋಪಾಖ್ಯಾನ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ತ್ರಿಜನ್ಮ ಮೋಕ್ಷ ದಶಾವತಾರ ಇವು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ.