ಬೆಂಗಳೂರು: ಇ-ಕಾಮರ್ಸ್ ವಲಯದ ದೈತ್ಯ ಕಂಪನಿ ಅಮೆಜಾನ್, ಎಕ್ಸ್‌ಬಾಕ್ಸ್ ಕಂಟ್ರೋಲ‌ರ್’ಗಾಗಿ ಆರ್ಡ‌ರ್ ಮಾಡಿದ ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದೆ.ಅಮೆಜಾನ್‌ನಿಂದ ಬಂದ ಬಾಕ್ಸ್ ತೆರೆದಾಗ ಎಕ್ಸ್‌ಬಾಕ್ಸ್ ಕಂಟ್ರೋಲರ್’ ನೊಂದಿಗೆ ಹಾವು ಕಾಣಿಸಿದೆ. ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಸಿಲುಕಿಕೊಂಡಿದ್ದರಿಂದ, ಯಾವುದೇ ಅಪಾಯ ಸಂಭವಿಸಿಲ್ಲ. ಬಾಕ್ಸ್ ಅನ್ನು ಬಕೆಟ್‌ನಲ್ಲಿ ಇಟ್ಟು ವಿಡಿಯೊ ಮಾಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ವಿಡಿಯೊವನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ತನ್ನಿ ಎಂಬವರು, ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ ಎಂದು ಬರೆದುಕೊಂಡಿದ್ದಾರೆ. ತನ್ವಿ ಅವರ ಖಾತೆಯಲ್ಲಿ ಬೆಂಗಳೂರಿನವರು ಎಂಬ ಮಾಹಿತಿ ಇದೆ.ಈ ಪೋಸ್ಟ್‌ಗೆ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿ, ಕ್ಷಮೆಯಾಚಿಸಿರುವ ಅಮೆಜಾನ್, ಕೂಡಲೇ ಸಂಪರ್ಕಿಸುವುದಾಗಿ ತಿಳಿಸಿದೆ.