ಮೂಡಲಗಿ: ಡಾ. ಬಿ.ಆರ್ ಅಂಬೇಡ್ಕರ ಅವರು ಕರ್ನಾಟಕಕ್ಕೆ ಭೇಟಿ ಕೊಟ್ಟು 100 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಪ್ರತಿ ವರ್ಷಕ್ಕಿಂತ ಈ ವರ್ಷ ತುಂಬಾ ವಿಭಿನ್ನವಾಗಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಅವರ ಉದಾತ ಧ್ಯೇಯಗಳನ್ನು ಸ್ಮರಣೆ ಮಾಡಿಕೊಂಡು ಮುಂದುವರೆಯುವುದು ಅಗತ್ಯೆ ಇದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಏ-14 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು 1925 ರಲ್ಲಿ ಬಹಿಷ್ಕೃತ ಹಿತಕಾರಿಣಿ ಸಮಾವೇಶಕ್ಕಾಗಿ ಅವರು ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷಗಳು ತುಂಬಿವೆ. ಆ ಐತಿಹಾಸಿಕ ಸವಿನೆನಪಿಗಾಗಿ ರಾಜ್ಯ ಬಿಜೆಪಿಯಿಂದ ಅಂಬೇಡ್ಕರ್ ನೂರು ಹೆಜ್ಜೆ ಕಾರ್ಯಕ್ರಮವನ್ನು ಬೆಂಗಳೂರಿನಿಂದ ನಿಪ್ಪಾಣಿವರೆಗೆ ರಥಯಾತ್ರೆಯ ಮೂಲಕ ಸಂಚರಿಸಿ ಜನಜಾಗೃತಿ ಮೂಡಿಸುತ್ತಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ತಾವು ಜನಿಸಿದ ಕುಟುಂಬದಲ್ಲಿನ ಕೀಳರಿಮೆಯ ಮನಸ್ಥಿತಿ ಮತ್ತು ಬಡತನವನ್ನು ಮೆಟ್ಟಿನಿಂತು ಅಗಾಧ ಅಧ್ಯಯನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆದು ದೇಶದ ಅಭಿವೃದ್ಧಿಗಾಗಿ ಸರ್ವರೂ ಕೊಡುಗೆ ನೀಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸಿದ ಧೀಮಂತ ನಾಯಕ ಎಂದರು.
ಶೋಷಿತ ಸಮಾಜದ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಂತಹ ಮತ್ತು ಶೋಷಿತ ಸಮುದಾಯದ ಪರವಾಗಿ ಅಂತ ಹೇಳಿ ಆ ಸಮಾಜದ ಓಟ ಬ್ಯಾಂಕ್ ಮಾತ್ರ ಉಪಯೋಗ ಮಾಡಿಕೊಳ್ಳುತ್ತಿರುವ ನಕಲಿ ಅಂಬೇಡ್ಕರ ಅನುಯಾಯಿಗಳ ಬಗ್ಗೆ ಜನರು ಜಾಗೃತಿಯಿಂದ ಇರಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಸತೀಶ ಕಡಾಡಿ, ಶಾಖಾ ವ್ಯವಸ್ಥಾಪಕರುಗಳಾದ ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ, ಪ್ರಶಾಂತ ಪಟ್ಟಣಶೆಟ್ಟಿ, ಶಿವಾನಂದ ಬಡಿಗೇರ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.