ನವದೆಹಲಿ : ತುರ್ತು ಪರಿಸ್ಥಿತಿಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸರ್ಕಾರ, ಜೂನ್ 25 ಅನ್ನು ಪ್ರತಿ ವರ್ಷ ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಿಸಲಾಗುವುದು ಎಂದು ಶುಕ್ರವಾರ ಪ್ರಕಟಿಸಿದೆ.
X ನಲ್ಲಿ ಈ ಬಗ್ಗೆ ಪ್ರಕಟಿಸಿರುವ ಗೃಹ ಸಚಿವ ಅಮಿತ್ ಶಾ ಅವರು ಗೆಜೆಟ್ ಅಧಿಸೂಚನೆಯನ್ನು ಪೋಸ್ಟ್ ಮಾಡಿದ್ದಾರೆ. “ಜೂನ್ 25, 1975 ರಂದು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸರ್ವಾಧಿಕಾರಿ ಮನಸ್ಥಿತಿಯ ಪ್ರದರ್ಶನದಲ್ಲಿ, ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಸುಕಿದರು. ತಮ್ಮ ತಪ್ಪಿಲ್ಲದೆ ಲಕ್ಷಾಂತರ ಜನರನ್ನು ಜೈಲಿಗೆ ಹಾಕಲಾಯಿತು ಮತ್ತು ಮಾಧ್ಯಮಗಳ ಧ್ವನಿಯನ್ನು ಮೌನಗೊಳಿಸಲಾಯಿತು. ಭಾರತ ಸರ್ಕಾರವು ಪ್ರತಿ ವರ್ಷ ಜೂನ್ 25 ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಿಸಲು ನಿರ್ಧರಿಸಿದೆ. ಈ ದಿನವು 1975 ರ ತುರ್ತು ಪರಿಸ್ಥಿತಿಯ ಅಮಾನವೀಯ ನೋವುಗಳನ್ನು ಸಹಿಸಿಕೊಂಡ ಎಲ್ಲರ ಬೃಹತ್ ಕೊಡುಗೆಗಳನ್ನು ಸ್ಮರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ ಎಂದು ಆಚರಿಸುವುದು ಭಾರತದ ಸಂವಿಧಾನವನ್ನು ತುಳಿದು ಹಾಕಿದಾಗ ಏನಾಗುತ್ತದೆ ಎಂಬುದನ್ನು ನೆನಪಿಸುತ್ತದೆ. ತುರ್ತು ಪರಿಸ್ಥಿತಿಯ ಕಾರಣದಿಂದ ಬಳಲಿದ ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುವ ದಿನವಾಗಿದೆ. ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ಸಿನ ಕರಾಳ ಘಟ್ಟವನ್ನು ಇದು ಬಿಚ್ಚಿಡುತ್ತದೆ” ಎಂದು ಪ್ರಧಾನಿ ಬರೆದಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದ ಈ ಘೋಷಣೆಯು ಸಂವಿಧಾನದ ಬಗ್ಗೆ ತೀವ್ರ ಚರ್ಚೆಯ ಹಿನ್ನೆಲೆಯಲ್ಲಿ ಬಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಯಲ್ಲಿ 543 ಲೋಕಸಭಾ ಸ್ಥಾನಗಳಲ್ಲಿ 240 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿತು – ಬಹುಮತಕ್ಕೆ 32 ಕಡಿಮೆ. ಆದರೆ ಬಿಜೆಪಿ ಭಾಗವಾಗಿರುವ ಎನ್‌ಡಿಎ 293 ಸ್ಥಾನಗಳೊಂದಿಗೆ ಬಹುಮತವನ್ನು ಪಡೆದುಕೊಂಡಿತು, ಇದು ಪ್ರಧಾನಿ ಮೋದಿಯ ಐತಿಹಾಸಿಕ ಮೂರನೇ ಅವಧಿಗೆ ದಾರಿ ಮಾಡಿಕೊಟ್ಟಿತು. ಕಾಂಗ್ರೆಸ್ ತನ್ನ ಸಂಖ್ಯೆಯನ್ನು 99 ಕ್ಕೆ ಸುಧಾರಿಸಿದೆ (2019 ರಲ್ಲಿ 52 ರಿಂದ).
ಕಾಂಗ್ರೆಸ್ ತನ್ನ ಸಂವಿಧಾನದ ಪಿಚ್ ಮೇಲೆ ಹರಸಾಹಸ ಮಾಡುತ್ತಿದೆ. ಜೂನ್‌ನಲ್ಲಿ ನಡೆದ 18 ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ, ಪಕ್ಷದ ಸದಸ್ಯರು ಮತ್ತು ಅದರ ಕೆಲವು ಮಿತ್ರಪಕ್ಷಗಳು ಸಂವಿಧಾನವನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದರು.

ಒಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲಿನ ಪ್ರೀತಿಯನ್ನು ಪ್ರತಿಪಾದಿಸುವ ಯಾವುದೇ ಹಕ್ಕಿಲ್ಲ ಎಂದು ಪ್ರಧಾನಿ ಮೋದಿ ಅಧಿವೇಶನದಲ್ಲಿ ತೀಕ್ಷ್ಣವಾದ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ, ಭಾರತವು ತುರ್ತು ಪರಿಸ್ಥಿತಿಯನ್ನು ಹೇರಿದ 49 ನೇ ವಾರ್ಷಿಕ ದಿನದ ವೇಳೆ, ಸ್ಪೀಕರ್ ಓಂ ಬಿರ್ಲಾ ಅವರು ಇದನ್ನು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ ಎಂದು ಕರೆದರು, ಕಾಂಗ್ರೆಸ್ ಮತ್ತು ಅದರ ಕೆಲವು ಮಿತ್ರಪಕ್ಷಗಳು ಇದಕ್ಕೆ ಆಕ್ಷೇಪಿಸಿದವು.

ಇಂದಿರಾ ಗಾಂಧಿಯವರ ಸರ್ಕಾರವು ಜೂನ್ 25, 1975ರಂದು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇಂದಿರಾ ಗಾಂಧಿಯವರು ಬಾಹ್ಯ ಮತ್ತು ಆಂತರಿಕ ಬೆದರಿಕೆಗಳನ್ನು ಉಲ್ಲೇಖಿಸಿ 21 ತಿಂಗಳ ತುರ್ತು ಪರಿಸ್ಥಿತಿಯನ್ನು ಹೇರಿದರು ಮೂಲಭೂತ ಸ್ವಾತಂತ್ರ್ಯಗಳನ್ನು ತಡೆಹಿಡಿದರು. ಮಾಧ್ಯಮಗಳನ್ನು ಮೌನಗೊಳಿಸಿದರು. ಜೆಪಿ ಎಂದೇ ಖ್ಯಾತರಾದ ಜಯಪ್ರಕಾಶ ನಾರಾಯಣ, ಬಿಜೆಪಿಯ ಪ್ರಮುಖರಾದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ವಿರೋಧ ಪಕ್ಷದಲ್ಲಿರುವ ಹಲವಾರು ಉನ್ನತ ರಾಜಕಾರಣಿಗಳು ಬಂಧನಕ್ಕೊಳಗಾದವರಲ್ಲಿ ಸೇರಿದ್ದಾರೆ. ಸುಮಾರು 20 ತಿಂಗಳ ನಂತರ ಮಾರ್ಚ್ 21, 1977ರಂದು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲಾಯಿತು. ಜೂನ್ 25, 2024ರಂದು ತುರ್ತು ಪರಿಸ್ಥಿತಿಯ 50 ವರ್ಷಗಳ ನೆನಪಿಗಾಗಿ ಕರಾಳದಿನವನ್ನು ಆಚರಿಸಲಾಯಿತು.