ಬೆಂಗಳೂರು :
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಅಮಿತ್ ಶಾ ಅವರು ಮಂಗಳವಾರ ರಾಜ್ಯದಲ್ಲಿ ವಿವಿಧ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ತಡರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಅವರು ಬೆಳಗ್ಗೆ 9ಗಂಟೆಗೆ ತಾವು ವಾಸ್ತವ್ಯ ಹೂಡಿರುವ ತಾಜ್ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರ ಸಮನ್ವಯ ಸಭೆಯನ್ನು ನಡೆಸಲಿದ್ದಾರೆ. ‎‫

ರಾಜ್ಯಕ್ಕೆ ಇದು ಅಮಿತ್ ಶಾ ಅವರ ಮೊದಲ ಚುನಾ ವಣಾ ಭೇಟಿ ಆಗಿದ್ದು, ಟಿಕೆಟ್ ಹಂಚಿಕೆಗೆ ಸಂಬಂಧಿ ಸಿದಂತೆ ರಾಜ್ಯ ಘಟಕದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯ ನಿವಾರಿಸಲು ಪ್ರಯತ್ನಿಸಲಿದ್ದಾರೆ. ಕಳೆದ ವಾರವಷ್ಟೇ ರಾಜ್ಯ ನಾಯಕರು ಸಮನ್ವಯ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಅಮಿತ್ ಶಾ ನೇತೃತ್ವದಲ್ಲಿ ಸಭೆನಡೆಯಲಿದ್ದು, ಚುನಾವಣೆಯ ರಣತಂತ್ರ ಹಾಗೂ ಉಭಯ ಪಕಗಳ ನಡುವಿನ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯಲಿದೆ.

ಬೆಂಗಳೂರು:
ಮಂಗಳವಾರ ಇಡೀ ದಿನ ಸಮಾವೇಶ, ಸಭೆಗಳ ಜತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನಪಟ್ಟಣದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ ಶೋನಲ್ಲಿ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಬಿಜೆಪಿ– ಜೆಡಿಎಸ್‌ ನಾಯಕರ ಸಮನ್ವಯ ಸಮಿತಿ ಸಭೆಯೂ ನಡೆಯಲಿದೆ. ಆ ಬಳಿಕ ಶಾ ಅವರು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಹಿಸಲಿದ್ದಾರೆ. ‘ಇದರಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ನೇರವಾಗಿ ಐದು ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜತೆ ಮಾತುಕತೆ ನಡೆಸಲಿದ್ದಾರೆ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್‌ ತಿಳಿಸಿದರು.

‘ಥೋಡೋ ವಿರುದ್ಧ ಜೋಡೋ, ಇದು ಕರ್ನಾಟಕ ಚುನಾವಣೆಯ ಘೋಷಣೆ. ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಮೊದಲ ವಿಜಯ ಇಲ್ಲಿಂದಲೇ ಆರಂಭವಾಗಲಿದೆ. ಆ ಕಾರಣಕ್ಕಾಗಿ ಗ್ರಾಮಾಂತರ ಕ್ಷೇತ್ರದಿಂದಲೇ ಅಮಿತ್‌ ಶಾ ಪ್ರಚಾರ ಆರಂಭಿಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಪಕ್ಷದೊಳಗಿನ ಆಂತರಿಕ ಭಿನ್ನಮತ, ಬಂಡಾಯದಂತಹ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸಮಾಧಾನದ ಬೆಂಕಿ ಶಮನ ಮಾಡುವ ಯತ್ನ ನಡೆಸಲಿದ್ದಾರೆ.

ಅಮಿತ್ ಶಾ, ಪಕ್ಷದ ವಿವಿಧ ಹಂತದ ನಾಯಕರ ಜತೆ, ಮಿತ್ರ ಪಕ್ಷ ಜೆಡಿಎಸ್ ನಾಯಕರ ಜತೆ ಹಲವು ಸಭೆಗಳನ್ನು ನಡೆಸಲಿದ್ದಾರೆ. ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿ ವಿವಾದಕ್ಕೆ ಒಳಗಾಗಿದ್ದ ಸಂಸದ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಕರ್ನಾಟಕದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.

ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿರುವ ಅಸಮಾಧಾನವನ್ನು ಬಗೆಹರಿಸುವುದರ ಜತೆಗೆ, ಮಿತ್ರ ಪಕ್ಷ ಜೆಡಿಎಸ್‌ ಜತೆಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿರುವ ಅಮಿತ್‌ ಶಾ ಅವರು, ಈ ವಿಚಾರವಾಗಿ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ. ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು. ಅಭ್ಯರ್ಥಿಗಿಂತ ಪಕ್ಷದ ಗೆಲುವು ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಮುಖ್ಯ. ಅದಕ್ಕಾಗಿ ಬೆವರು ಹರಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಪರೋಕ್ಷವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದರೆ, ಅಂತಹವರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

ಬಂಡಾಯ ಎದುರಿಸುತ್ತಿರುವ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೀದರ್‌, ಬೆಳಗಾವಿ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಪ್ರಮುಖ ನಾಯಕರ ಸಮಿತಿ (ಕೋರ್‌ ಕಮಿಟಿ) ಸದಸ್ಯರ ಜೊತೆಗೂ ಶಾ ಸಭೆ ನಡೆಸಲಿದ್ದಾರೆ.