ಅಮ್ಮ ಇಲ್ಲದ ದಿನದಾರಂಭ
ಅಮ್ಮ ಇಲ್ಲದ ಬೆಳಗು
ಊಹಿಸಿಕೊಳ್ಳಲಾಗುತ್ತಿಲ್ಲ…ಇಂದು ಬೆಳಿಗ್ಗೆ ಎದ್ದಾಗ,
ಅಡುಗೆ ಮನೆಯಿಂದ ಬ್ರಾಹ್ಮೀ ಮುಹೂರ್ತದಲ್ಲಿ ಕೈಬಳೆಯ ಸದ್ದಿಲ್ಲ… ಜೊತೆಗೆ ಕಾಫಿ ಸಿದ್ಧವಾಗುವ ಸೂಚನೆಯಾಗಿ ಸ್ಟೀಲ್ ಲೋಟದ ಸದ್ದೂ ಇಲ್ಲ…ಅಮ್ಮನ ಇಷ್ಟದ, “ನಂಗಿಲ್ಲೇ ಬೆಸ್ಟ್” ಎನ್ನುತ್ತಾ ಅಲ್ಲೇ ಮಲಗಿ ನೆಮ್ಮದಿ ಕಾಣುತ್ತಿದ್ದ ಅದೇ ಅಡುಗೆ ಮನೆಯತ್ತ ನೋಡಿದರೆ, ಲೈಟಿಲ್ಲ. ಅಮ್ಮನ ಚಲನವಲನವೂ ಇಲ್ಲ.
ಆವಾಗೆಲ್ಲ… ಈ ಅಮ್ಮ ಯಾಕಿಷ್ಟು ಬೇಗ ಏಳುತ್ತಾರೆ ಅಂತ ಸಿಡುಕುತ್ತಿದ್ದೆ. ಕಾರಣ, ಪತ್ರಿಕೆಯಲ್ಲಿ ನೈಟ್ ಡ್ಯೂಟಿ ಮುಗಿಸಿ ಮನೆಗೆ ಬಂದು ಮಲಗುವಾಗ ಮೂರು ಗಂಟೆ. ಐದು ಗಂಟೆಗೆ ಮತ್ತೆ ಎಚ್ಚರ. ಎದ್ದ ಮೇಲೆ ನಿದ್ದೆ ಬಾರದು. ಹಾಗೆ.
ಆದರೆ, ಅಮ್ಮ ತನ್ನ ಪ್ರತಿಯೊಂದು ನಡೆಯಲ್ಲಿಯೂ ಒಂದು ಪಾಠ ಇಟ್ಟು ಹೋಗಿದ್ದರೆಂದು ನಿಧಾನಕ್ಕೆ ತಿಳಿಯಲಾರಂಭಿಸಿತ್ತು.
ಯಕ್ಷಗಾನ ರಂಗಸ್ಥಳವೇರಿ ಯಕ್ಷಾಭಿಮಾನಿಗಳ ರಾತ್ರಿಯನ್ನು ಬೆಳಗುತ್ತಿದ್ದ ನನ್ನಮ್ಮ, ಮನೆಗೆ ಬಂದು ನಮ್ಮ ಬದುಕು ಬೆಳಗಲೆಂದು ಮನೆವಾರ್ತೆ, ಊಟ ತಿಂಡಿ ಸಿದ್ಧಪಡಿಸಿ, ನಂತರ ತನಗೆ ಸಿಕ್ಕ ಹಗಲನ್ನು ರಾತ್ರಿಯಾಗಿಸಿ ಹಿಂದಿನ ರಾತ್ರಿ ಕೆಟ್ಟಿದ್ದ ನಿದ್ದೆಗೆ ಜಾರಲೆತ್ನಿಸಿದವರು. ನಮ್ಮ ಹಗಲು ಅವರಿಗೆ ರಾತ್ರಿ. ಯಕ್ಷಗಾನ ಕಲಾವಿದರ ಬದುಕೇ ಹಾಗಲ್ಲವೇ? ಮತ್ತು ಅವರ ಆರೋಗ್ಯಕ್ಕೆ ದೊಡ್ಡ ಸಮಸ್ಯೆಯೂ ಅದೇ ಅಲ್ಲವೇ?
ಅಮ್ಮ ಯಾರು ಏನೇ ಅಂದರೂ ಬೆಳಿಗ್ಗೆ ತಾನೇಳುತ್ತಿದ್ದಳು, ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಆರೋಗ್ಯಕರ ಜೀವನಶೈಲಿಗೆ ಹೇತು ಅಂತ ಅವಳಿಗೆ ಅನುಭವದಿಂದ ಗೊತ್ತಿತ್ತು! ಮಕ್ಕಳೂ ಇದನ್ನು ಅನುಸರಿಸಬೇಕಲ್ಲಾ? ಮಕ್ಕಳಾರೋಗ್ಯವೂ ಚೆನ್ನಾಗಿರಬೇಕಲ್ಲ? ಅಂತದ್ದೊಂದು ಪಾಠ ಇಲ್ಲಿತ್ತಲ್ಲ!
ಅಮ್ಮ ಇದ್ದಾರೆಂದರೆ, ಆ ದಿನ ಆತ್ಮವಿಶ್ವಾಸದಿಂದ, ಉಲ್ಲಾಸದಿಂದ ಕೆಲಸಕ್ಕೆ ಹೋಗಬಹುದೆಂಬ ನಂಬಿಕೆಯಲ್ಲೇ ಕಾಲ ಕಳೆದವನು ನಾನು. ಅಮ್ಮ ಈಗಿಲ್ಲ. ಅದೊಂದು ವಿಶ್ವಾಸ, ಧೈರ್ಯ ಉಡುಗಿದೆ.
ಯಕ್ಷಗಾನ ಕಲಾವಿದೆಯಾದ ಕಾರಣಕ್ಕೆ ಅವಳ ಬದುಕು ಸಾಮಾನ್ಯರಂತೆ ಇರಲಿಲ್ಲ. ಮಕ್ಕಳ ಮೇಲೆ ನಿಗಾ ವಹಿಸುವ, ಪ್ರೀತಿ ವ್ಯಕ್ತಪಡಿಸುವ, ಅಕ್ಕರೆ ತೋರುವ ಸಮಯದಲ್ಲಿ ನಿದ್ದೆ (ರಾತ್ರಿಯ ಯಕ್ಷಗಾನಕ್ಕಾಗಿ) ಮುಖ್ಯವಾಯಿತು. ಕೈಹಿಡಿದ ಪತಿಯ ನಿದ್ದೆಗೂ ಅಡಚಣೆಯಾಗದಂತೆ ನೋಡಿಕೊಳ್ಳುವುದು ಸತಿಯ ಕರ್ತವ್ಯ. ಹೀಗಾಗಿ, ನಮ್ಮಂಥ ಪೋಕರಿ ಮಕ್ಕಳನ್ನೂ ಗಲಾಟೆ ಮಾಡದಂತೆ ಮೌನವಾಗಿರಿಸಿಕೊಳ್ಳಬೇಕಾಗಿತ್ತು!
ಮೇಳದ ಕ್ಯಾಂಪ್ (ಆಟ) ದೂರದೂರಿನಲ್ಲಿದ್ದರಂತೂ ಮನೆಗೆ ಬರುವಾಗ ನಾಲ್ಕೈದು ದಿನ, ವಾರ, ತಿಂಗಳು ಆಗಿದ್ದೂ ಇದೆ. ಹೀಗಾಗಿ, ಅಮ್ಮ-ಮಕ್ಕಳ ಬಾಂಧವ್ಯವು ಇಷ್ಟದ ನೆಂಟರ ನಂಟಿನಂತಾಗಿತ್ತು ಅನ್ನಬಹುದೇ? ಆದರೆ, ಕರುಳ ಬಳ್ಳಿಯ ಸಂಬಂಧ – ಗುಪ್ತ ಗಾಮಿನಿಯಾಗಿಯೇ ಪ್ರವಹಿಸುತ್ತಲೇ ಇತ್ತು.
ಮಕ್ಕಳಾದ ನಮ್ಮನ್ನು ಕಂಡಾಗೆಲ್ಲಾ ಅಮ್ಮನಲ್ಲಿ ಏನಾದರೂ ಹೇಳಿಕೊಳ್ಳಲಾಗದ ತಪ್ಪಿತಸ್ಥ ಭಾವನೆಯ ಭಾವತರಂಗಗಳು ಹುಯ್ದಾಡುತ್ತಿದ್ದವೇ?
ಅಮ್ಮ ತನ್ನ ಕಷ್ಟವನ್ನಾಗಲೀ, ಸುಖವನ್ನಾಗಲೀ ಹಂಚಿಕೊಳ್ಳದ ಮನೋಭಾವದವಳಾದುದರಿಂದ ನಮ್ಮ ಗ್ರಹಿಕೆಗೆ ಎಟುಕದ ವಿಚಾರವಿದು.
ಉದ್ಯೋಗ ನಿಮಿತ್ತ ಪರವೂರಿಗೆ ಸೇರಿಕೊಂಡ ನಾವು, ಊರಿಗೆ ಬಂದು ವಾಪಸ್ ಹೊರಟಾಗ ಮುಗ್ಧ ಮುಖಭಾವದೊಂದಿಗೆ ಅವಳ ಬಾಯಿಂದ ಆಗಾಗ್ಗೆ ಕೇಳಿಬರುತ್ತಿದ್ದ ಮಾತು – ಬರ್ತಾ ಇರಿ. ನೀವೆಲ್ಲ ಬಂದ್ರೆ ಖುಷಿಯಾಗ್ತದೆ 😭 ಈ ಮಾತು ಕೇಳಿ, ಬಂದ ಕಣ್ಣೀರನ್ನು ಹೊರಗೆ ಬಾರದಂತೆ ತಡೆದುಕೊಂಡೇ, ಮುಖ ಎತ್ತಿ ನೋಡಲಾಗದೆ, ವೇದನೆಯೊಂದಿಗೆ ಬದುಕಿನ ಅನಿವಾರ್ಯತೆಯತ್ತ ತೆರಳಬೇಕಾಗಿತ್ತಲ್ಲ!
ಇದು ಈಗ ನೆನಪಾದಾಗ ದಿಢೀರ್ ಆಗಿ ಅನ್ನಿಸಿದ್ದಿದು… ಮಕ್ಕಳಿದ್ದಾಗ ನಿಮ್ಮನ್ನು ಬಿಟ್ಟು ಆಟಕ್ಕೆ ಹೋಗಿದ್ದ ನನಗೆ, ಈಗ ನಮ್ಮೊಂದಿಗೆ ಇರಿ ಅಂತ ಹೇಳುವ ಹಕ್ಕಿದೆಯಾ? ಎಂಬ ಭಾವನೆ ಏನಾದರೂ ಅವಳನ್ನು ಕಾಡುತ್ತಿತ್ತೇ? ಛೇ! ಹಾಗಿರಲಾರದು, ಹಾಗಾಗದಿರಲಿ! ಅಮ್ಮನ ಬಗ್ಗೆ ಆ ಭಾವ ನಮಗಂತೂ ಇಲ್ವೇ ಇಲ್ಲ!
ಚಿತೆಗೆ ಅಗ್ನಿಸ್ಪರ್ಶ ಮಾಡುವಾಗಲೂ, ಇಲ್ಲ, ಅಮ್ಮನಿಗೆ ಏನೂ ಆಗಿಲ್ಲ. ಹಿಂದೊಮ್ಮೆ ಆದಂತೆಯೇ, ಶುಗರ್ ಜಾಸ್ತಿಯಾಗಿ ಉಸಿರಾಟ ಏರುಪೇರಾಗಿ, ನೋವು ತಾಳಿಕೊಂಡು ಮೌನವಾಗಿ ಅನುಭವಿಸುತ್ತಿದ್ದಾಳೆ. ಬೆಂಕಿಯ ಬಿಸಿ ಕೆಳಗಿನಿಂದ ಆವರಿಸುತ್ತಿರುವಂತೆಯೇ ಈಗ ಎದ್ದು ಕುಳಿತು ನಮ್ಮನ್ನೆಲ್ಲ ಅವರ ಸಿಗ್ನೇಚರ್ ನಗುವಿನೊಂದಿಗೆ, “ಏರ್ಯವು” (ಯಾರದು) ಬಿಸಿ ಮುಟ್ಟಿಸಿದ್ದು? ಅಂತ ತುಂಟತನದೊಂದಿಗೆ ಕೇಳಬಹುದೇ? ಅಂತ ದೂರದ ಆಸೆ, ನಿರೀಕ್ಷೆಯಿತ್ತು. ಊಹೂಂ, ಅಗ್ನಿ ಜ್ವಾಲೆ ಜೋರಾದಂತೆ, ಅಮ್ಮ ಎದ್ದು ಕುಳಿತುಕೊಳ್ಳಲೇ ಇಲ್ಲ 😰 ಮುಖದ ಮುಸುಕು ತೆಗೆದು ನಗಲೇ ಇಲ್ಲ😰
ಯಕ್ಷಗಾನ ಕಲಾವಿದರನೇಕರು, ಅಭಿಮಾನಿಗಳು, ಸ್ನೇಹಿತರು, ಬಂಧುಗಳು, ಇಷ್ಟರು, ಸಹೋದ್ಯೋಗಿಗಳು ಎಲ್ಲರೂ ಕರೆ ಮಾಡಿ ಸಾಂತ್ವನ, ಧೈರ್ಯ ತುಂಬಿದವರಿದ್ದೀರಿ. ದುಃಖ ಸಹಿಸುವ ಶಕ್ತಿ ಇಲ್ಲ. ಆದರೆ ಜಬ್ಬಾರ್ ಸಮೊ ಅವರು ಕರೆ ಮಾಡಿ ಧೈರ್ಯ ತುಂಬಲು ಹೇಳಿದ ಆ ಒಂದು ಸಾಲು ದಾರಿದೀಪದಂತಿದೆ.
ಅಮ್ಮನ ಸ್ಥಾನ ಖಾಲಿಯಾಗಿದೆ. ಅಲ್ಲಿ ಬೇರೆಯವರನ್ನು ಕಲ್ಪಿಸುವುದು ಅಸಾಧ್ಯ ಆದರೂ… ಸ್ವಲ್ಪ ಸಮಯ ನಿಮಗೆ ಬದುಕು ಬಿಕೋ ಅನ್ನಿಸಬಹುದು. ಆ ದುಃಖವನ್ನು ಅನುಭವಿಸಿಬಿಡಿ, ಅದನ್ನು ಮೀರಿ ಹೋಗಲು ಪ್ರಯತ್ನ ಮಾಡದಿರಿ. ಆಗ ನಿಮಗೆ ಸಮಾಧಾನ ಆಗಬಹುದು. ತುಟಿ ಕಚ್ಚಿ, ಅವುಡುಗಚ್ಚಿ ನೋವನ್ನು ಹತ್ತಿಕ್ಕಿಕೊಳ್ಳಬೇಡಿ. ಪೂರ್ತಿಯಾಗಿ, ಜೋರಾಗಿ ಅತ್ತುಬಿಡಿ. ತಾಯಿಯ ವಿಯೋಗದ ದುಃಖವನ್ನು ಪೂರ್ತಿಯಾಗಿ ಅನುಭವಿಸಿಬಿಡಿ. ಇದರಿಂದ ಅಮ್ಮನ ಪ್ರೀತಿಯನ್ನು ಹೆಚ್ಚು ಹತ್ತಿರದಿಂದ ಆನಂದಿಸಬಹುದು. ಹೌದು.
ಚಿಕ್ಕವರಿದ್ದಾಗ ನಾವು ಅಳುತ್ತಿದ್ದರೆ ಸಂತೈಸಲು ಅಮ್ಮ ಇರುತ್ತಿದ್ದಳು. ನೋವಾಗದಂತೆ, ನೋವು ಕಡಿಮೆಯಾಗುವಂತೆ ನೋಡಿಕೊಳ್ಳುತ್ತಿದ್ದಳು. ಆದರೆ, ಈಗ ಅಮ್ಮ ಇಲ್ಲ!
ಅಷ್ಟೇ ಅಲ್ಲ. ಕೊನೆಯ ದಿನಗಳಲ್ಲಿ ಅಮ್ಮನ ನೋವು ಕಡಿಮೆ ಮಾಡಲು ನಮ್ಮಿಂದೇನು, ವೈದ್ಯರಿಂದನೂ ಸಾಧ್ಯವಾಗಲಿಲ್ಲವಲ್ಲ! ಡೆಮೆನ್ಷಿಯಾದಿಂದಾಗಿ ಎಲ್ಲಿ, ಏನು ನೋವು ಅಂತ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲದ, ಹಸುಗೂಸಿನಂತಿದ್ದಳು ಅಮ್ಮ. ಅದೆಷ್ಟು ನೋವು ತಿಂದಳೋ?
ಅಮ್ಮನನ್ನು ಅರಿಯಲು, ಅಮ್ಮನ ವ್ಯಾಪ್ತಿ ವಿಸ್ತಾರವನ್ನು ತಿಳಿಯಲು ವಿಫಲವಾಗಿಬಿಟ್ಟಿದ್ದೇನೆ. ಆದರೆ…
* ತಾನು ಶಾಲೆಗೆ ಹೋಗದಿದ್ದರೂ, ಬಾಲ್ಯದಲ್ಲಿ ನನ್ನ ಅಕ್ಷರ, ಗಣಿತ, ಇಂಗ್ಲಿಷ್, ಹಿಂದಿ ಬಗೆಗಿನ ಸಂದೇಹ ಪರಿಹರಿಸುತ್ತಿದ್ದ ಗುರು;
* ಉಳಿದವರೆಲ್ಲ ಬರ್ತ್‌ಡೇ ಆಚರಿಸುವಾಗ, ತಾನು ಡಬ್ಬಿಯಲ್ಲಿ ಕೂಡಿಟ್ಟಿದ್ದ ರೂಪಾಯಿ ನಾಣ್ಯಗಳಲ್ಲೊಂದು ನೀಡಿ ಫ್ರೆಂಡ್ಸ್‌ಗೆ ಚಾಕಲೆಟ್ ಕೊಡುವಂತೆ ಹೇಳಿದ್ದ ವಾತ್ಸಲ್ಯಮಯಿ;
* ಬಾಲ್ಯದಲ್ಲಿ ಅಪ್ಪ ಬೇರೆ ಕಡೆ ಹೋದಾಗ ಮದ್ದಳೆ ಪಾಠ ಬೋಧಿಸಿದ ಗುರು;
*ಸರಿ ಮಾಡದಿದ್ದರೂ ಚಿಂತಿಲ್ಲ, ತಪ್ಪು ಮಾಡಬಾರದೆಂಬ ಅಮೂಲ್ಯ ಪಾಠ ಕಲಿಸಿದ್ದ ಮಹಾಗುರು;
* ಪಿಯುಸಿ ಸೇರಲು ಫೀಸ್‌ಗೆ ದುಡ್ಡಿಲ್ಲದಾಗ, ಕೂಡಿಟ್ಟ ಹಣದಿಂದ 50 ರೂ. ಕಟ್ಟಿ, ತಕ್ಷಣ ಕಾಲೇಜಿಗೆ ಹೋಗೆಂದು ಆದೇಶಿಸಿದ ಮಾತೆ;
* ಆಟದಲ್ಲಿ, ಪಾಠದಲ್ಲಿ, ಊಟದಲ್ಲಿ, ಉಡುಗೆಯಲ್ಲಿ ಮತ್ತು ದುಡ್ಡಿನಲ್ಲಿ ಶಿಸ್ತು ಬೋಧಿಸಿದ ಮಹಾನ್ ಮಾತೆ…
* ಸಹ ಕಲಾವಿದರ ಅಕ್ಕರೆಯ ಲೀಲಕ್ಕ
* ಕಿರಿಯ ಕಲಾವಿದರ ಪ್ರೀತಿಯ ಲೀಲಮ್ಮ
* ಗಂಡು ಮೆಟ್ಟಿನ ಕಲೆಯಲ್ಲಿ ಹೆಂಗಳೆಯರೂ ಮೆರೆಯಲು ಸ್ಫೂರ್ತಿಯಾದ ಯಕ್ಷ ಮಾತೆ
* ಅಪ್ಪನ ಪ್ರೀತಿಯ ಶಿಷ್ಯೆ
* ಬದುಕಿನಲ್ಲಿ ಬೆಳಕು ತೋರಿದ ಜಗತ್ತು
* ಆ ಕಾಲದಲ್ಲೇ ನೈಟ್ ಡ್ಯೂಟಿ ಮಾಡುತ್ತಾ, ಹಗಲಲ್ಲೂ ಸಂಸಾರದ ನೊಗ ಹೊತ್ತ ಗೃಹಿಣಿ
* ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಕಲಾವಿದರಿಗೆ ಅಮ್ಮನ ಸ್ಥಾನ ತುಂಬಿದ ಕಲಾ ಮಾತೆ
* ಭಾಗವತಿಕೆಯಲ್ಲಿ ಯಾರೂ ಏರಲಾಗದ ಸಾಧನೆ ಮಾಡಿದ ಅಚ್ಚ ಕಲಾವಿದೆ…ಛೇ! ಎಂಥಾ ಜೀವನವಿದು… ಒಂದೇ ದಿನ ಈ ಎಲ್ಲವನ್ನೂ ಕಳೆದುಕೊಂಡೆ!
ಆ ಲೋಕದಲ್ಲಿ ಅಮ್ಮನ ಹಾಡು ಅನುರಣಿಸಲಿ, ಅಮ್ಮನ ಜೀವವು ನೆಮ್ಮದಿಯ ತಾಣದಲ್ಲಿ ನೆಲೆಯಾಗಲಿ, ಮತ್ತೊಮ್ಮೆ ಇದೇ ಅಮ್ಮನ ಮಡಿಲಲ್ಲಿ ಮಗುವಾಗಿ ನಾನು ನಗುವುದನ್ನು ಆ ದೇವರೂ ತಡೆಯಲಾರದಂತಾಗಲಿ.
ಯಕ್ಷಗಾನ ಕುಟುಂಬಕ್ಕಾದ ಆಘಾತ, ನಷ್ಟದ ಈ ದಿನಗಳಲ್ಲಿ ಸಾಂತ್ವನದ ನುಡಿಗಳಿಂದ ಬೇಸರದ ಸೆಲೆಗಳನ್ನು, ನೋವಿನ ಅಲೆಗಳ ತೀವ್ರತೆಯನ್ನು ತಗ್ಗಿಸಿದ ಸಜ್ಜನ ಸಂದೋಹಕ್ಕೆ ಶಿರಬಾಗಿ ನಮಿಸುವೆ🙏
ಎನಗಿಂತ ಕಿರಿಯರಿಲ್ಲ
-ಅವಿನಾಶ್ ಬೈಪಾಡಿತ್ತಾಯ
(16 December 2024)
ಕೃಪೆ- ಬಲ್ಲಿರೇನಯ್ಯಾ ವಾಟ್ಸಪ್ ಗ್ರೂಪ್