ಬೆನೊನಿ (ದಕ್ಷಿಣ ಆಫ್ರಿಕಾ):
19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿದೆ.
ಭಾರತೀಯರು ಇಂದು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯವನ್ನು ಹೆಚ್ಚಿನ ರನ್ ಗಳಿಸಿದಂತೆ ತಡೆಯುವಲ್ಲಿ ಯಶಸ್ವಿಯಾದರು.
ಐದು ಬಾರಿಯ ಚಾಂಪಿಯನ್ ಭಾರತ ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಕನಸಿನೊಂದಿಗೆ ಕಣಕ್ಕಿಳಿದಿದೆ.
ಒಂಬತ್ತನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಮರ್ಥರನ್ನೊಳಗೊಂಡ ಆಸ್ಟ್ರೇಲಿಯಾ 4ನೇ ಬಾರಿ ಟ್ರೋಫಿಗೆ ಮುತ್ತಿಡುವ ಲೆಕ್ಕಾಚಾರದಲ್ಲಿ ಆಡುತ್ತಿದೆ.
ಸಚಿನ್ ದಾಸ್, ಮುಷೀರ್ ಖಾನ್ ಮತ್ತು ಸೂರ್ಯಕುಮಾರ್ ಪಾಂಡೆ ಅವರಂತಹ ಪ್ರತಿಭಾವಂತರು ಭಾರತ ತಂಡದಲ್ಲಿದ್ದಾರೆ. ಅದೇರೀತಿ, ಆಸ್ಟ್ರೇಲಿಯಾ ಬಳಗದಲ್ಲಿ ಪರಿಣಾಮಕಾರಿ ಬೌಲರ್ಗಳು ಇದ್ದಾರೆ.
2012 ಮತ್ತು 2018ರ ಟೂರ್ನಿಗಳ ಫೈನಲ್ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಭಾರತ, 2016ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಫೈನಲ್ಗೇರಿದ ಹೆಗ್ಗಳಿಕೆ ಹೊಂದಿದೆ. 2016 ಹಾಗೂ 2020ರಲ್ಲಿ ಬಿಟ್ಟರೆ ಉಳಿದ ಆವೃತ್ತಿಗಳಲ್ಲಿ ಜಯಭೇರಿ ಬಾರಿಸಿದೆ.
2023ರ ನವೆಂಬರ್ 19ರಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಫೈನಲ್ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಎದುರು ಸೋತಿತ್ತು. ಇದೀಗ ಉಭಯ ದೇಶಗಳ ‘ಭಾವಿ ತಾರೆ‘ಗಳು ಮುಖಾಮುಖಿಯಾಗಲಿವೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಟಿಂ ಇಂಡಿಯಾ ನಾಯಕ ಉದಯ್ ಸಹಾರನ್, ‘ನಾವು ಮುಯ್ಯಿ ತೀರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ವರ್ತಮಾನದ ಮೇಲೆ ಮಾತ್ರ ನಮ್ಮ ಗಮನವಿದೆ. ಹಳೆಯ ಘಟನೆ ಅಥವಾ ಭವಿಷ್ಯದ ಬಗ್ಗೆ ಚಿಂತಿತರಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.