ವಿಶಾಖಪಟ್ಟಣ:
ಭಾರತೀಯ ಕ್ರಿಕೆಟ್ ಲೋಕದ ಯುವ ತಾರೆ ಯಶಸ್ವಿ ಜೈಸ್ವಾಲ್ ಇದೀಗ ನವ ಇತಿಹಾಸ ರಚಿಸಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ಯಶಸ್ವಿ ಇದೀಗ ಇಂಗ್ಲೆಂಡ್ ವಿರುದ್ಧ ಮಿಂಚಿದ್ದಾರೆ.

ಇಂಗ್ಲೆಂಡ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಭಾರತದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರು.

ಇದರೊಂದಿಗೆ ಅವರು ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಪರ ದ್ವಿಶತಕ ಸಿಡಿಸಿದ ಮೂರನೇ ಅತಿ ಕಿರಿಯ ಹಾಗೂ ನಾಲ್ಕನೇ ಎಡಗೈ ಬ್ಯಾಟರ್‌ ಎನಿಸಿದರು. ಇವರ ಆಟದ ಬಲದಿಂದ ಆತಿಥೇಯ ತಂಡ, ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 396 ರನ್‌ ಗಳಿಸಿ ಆಲೌಟ್‌ ಆಗಿದೆ.

ಏಕಾಂಗಿ ಹೋರಾಟ
ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತದ ಇನಿಂಗ್ಸ್‌ಗೆ ಯಶಸ್ವಿ ಆಧಾರವಾದರು.

ಶುಕ್ರವಾರ ಆರಂಭವಾದ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 179 ರನ್‌ ಗಳಿಸಿದ್ದ ಅವರು, ಎರಡನೇ ದಿನವೂ ಚೆಂದದ ಆಟ ಮುಂದುವರಿಸಿದರು.

ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ಯಶಸ್ವಿ, ಒಂದೆಡೆ ನಿರಂತರವಾಗಿ ವಿಕೆಟ್‌ಗಳು ಬೀಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದರು. ರೋಹಿತ್‌ ಅವರ ಆಟ ಕೇವಲ 14 ರನ್‌ಗಳಿಗೆ ಮುಕ್ತಾಯವಾಯಿತು.

ಬಳಿಕ ಬಂದ ಶುಭಮನ್‌ ಗಿಲ್‌, ಭರವಸೆ ಮೂಡಿಸಿದರಾದರೂ 34 ರನ್‌ ಗಳಿಸಲಷ್ಟೇ ಶಕ್ತರಾದರು. ಶ್ರೇಯಸ್‌ ಅಯ್ಯರ್‌ 27 ರನ್‌ ಗಳಿಸಿದರೆ, ಪದಾರ್ಪಣೆ ಪಂದ್ಯವಾಡಿದ ರಜತ್ ಪಾಟೀದಾರ್ 32 ರನ್‌ ಕಲೆಹಾಕಿ ನಿರ್ಗಮಿಸಿದರು. ಅಕ್ಷರ್ ಪಟೇಲ್‌ 27 ರನ್ ಗಳಿಸಿದ್ದಾಗ ಎಡವಿದರು. ವಿಕೆಟ್‌ ಕೀಪರ್ ಬ್ಯಾಟರ್ ಶ್ರೀಕರ್‌ ಭರತ್‌ (17) ಮತ್ತು ಆರ್‌.ಅಶ್ವಿನ್‌ (20) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರೂ, ತಂಡದ ಮೊತ್ತದ ಅರ್ಧಕ್ಕಿಂತಲೂ ಹೆಚ್ಚು ರನ್‌ಗಳು ಯಶಸ್ವಿ ಬ್ಯಾಟ್‌‌ನಿಂದ ಬಂದವು.

ಒಟ್ಟು 290 ಎಸೆತಗಳನ್ನು ಎದುರಿಸಿ, 7 ಸಿಕ್ಸರ್‌ ಮತ್ತು 19 ಬೌಂಡರಿ ಸಹಿತ 209 ರನ್‌ ಗಳಿಸಿದ್ದ ಅವರು ಜೈಸ್ವಾಲ್‌, ತಂಡದ ಮೊತ್ತ 383 ರನ್‌ ಆಗಿದ್ದಾಗ ಔಟಾದರು. ಬಳಿಕ ಭಾರತದ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ರೋಹಿತ್‌ ಪಡೆಯ ಕೊನೆಯ ಎರಡು ವಿಕೆಟ್‌ಗಳು 13 ರನ್‌ ಅಂತರದಲ್ಲಿ ಪತನವಾದವು.

ಇಂಗ್ಲೆಂಡ್‌ ಪರ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌, ರೆಹಾನ್‌ ಅಹಮದ್‌ ಮತ್ತು ಶೋಯಬ್ ಬಷೀರ್‌ ತಲಾ ಮೂರು ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್‌ ಅನ್ನು ಟಾಮ್‌ ಹಾರ್ಟ್ಲೇ ಜೇಬಿಗಿಳಿಸಿಕೊಂಡರು.