ಬೆಳಗಾವಿ : ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಇದೀಗ ಜನುಮದಿನದ ಸಂಭ್ರಮ. ಬಡತನದಲ್ಲಿ ಮೇಲೆದ್ದು ಬಂದ ವಿಠ್ಠಲ ಹಲಗೇಕರ ಅವರು ಸರಳ ಸಜ್ಜನಿಕೆ, ಪ್ರಾಮಾಣಿಕತೆಯ ಕೆಲಸ ಕಾರ್ಯಗಳಿಂದ ಜನಮನ ಗೆದ್ದ ಶಾಸಕರು ಎಂದೇ ಹೆಸರುವಾಸಿಯಾಗಿದ್ದಾರೆ.

ಅವರಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮೂಲಕ ಪ್ರಚಾರ ಪಡೆಯುವ ಮನಸಿಲ್ಲ. ಕೇವಲ ಜನರ ಬಳಿ ಹೋಗಿ ಅವರ ದುಃಖ-ದುಮ್ಮಾನ ಆಲಿಸಿ ಸಮಸ್ಯೆಗಳಿಗೆ ಶಾಶ್ವತವಾಗಿ ಸ್ಪಂದನೆ ನೀಡಬೇಕು ಎನ್ನುವುದು ಏಕೈಕ ಕನಸು. ಆ ನಿಟ್ಟಿನಲ್ಲಿ ಅವರು ಕಳೆದ ಮೂರು ದಶಕಗಳಿಗಿಂತ ಹೆಚ್ಚು ಕಾಲ ಸಮಾಜ ಸೇವೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ.

ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಮನೆತನದಿಂದ ಬಂದಿರುವ ವಿಠ್ಠಲ ಹಲಗೇಕರ ಅವರು ಮೊದಲಿನಿಂದಲೂ ಪ್ರತಿಭಾವಂತರು. ತಮ್ಮ ಹುಟ್ಟೂರು ಖಾನಾಪುರ ತಾಲೂಕು ಅತ್ಯಂತ ಕುಗ್ರಾಮವಾಗಿದೆ. ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಮುಂದಿನ ದಿನಗಳಲ್ಲಿ ಇಡೀ ಖಾನಾಪುರ ಮತಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬಹಳ ಹಿಂದೆಯೇ ಕನಸು ಕಂಡು ಇದೀಗ ಆ ನಿಟ್ಟಿನಲ್ಲಿ ಅವಿರತವಾಗಿ ತಮ್ಮನ್ನು ಕ್ಷೇತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ.

ಹುಟ್ಟೂರು ತೋಪಿನಕಟ್ಟಿಯಲ್ಲಿ ವಾಸವಾಗಿರುವ ಜನರು ತೀರಾ ಹಿಂದುಳಿದವರು, ರೈತರು, ಅನಕ್ಷರಸ್ಥರೇ ಇರುವ ಕುಗ್ರಾಮ. ಅಲ್ಲಿನ ಸಮಸ್ಯೆಗಳನ್ನು ನೋಡುತ್ತ ಬಂದಿರುವ ವಿಠ್ಠಲ ಹಲಗೇಕರ ಅವರು ಈಗ ಖಾನಾಪುರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದೇ ತಮ್ಮ ಮೊದಲ ಆದ್ಯತೆ ಎಂದು ಭಾವಿಸಿ ಆ ನಿಟ್ಟಿನಲ್ಲಿ ಪರಿಶ್ರಮಿಸುತ್ತಿದ್ದಾರೆ.

ಹಲಗೇಕರ ಅವರಿಗೆ ಜನವರಿ 7 ಹುಟ್ಟು ಹಬ್ಬದ ಸಂಭ್ರಮ. ಆದರೆ, ಅವರು ಎಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡವರಲ್ಲ. ಪ್ರತಿ ವರ್ಷ ಜನವರಿ ಮೊದಲ ವಾರ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಸೇವೆಯಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಕೀರ್ತನೆ, ಅದಕ್ಕೂ ಮೊದಲು ಕುಸ್ತಿ, ಶರ್ಯತ್ತು, ಈ ವರ್ಷ ಸರಕಾರದ ಯೋಜನೆಗಳು ಜನರಿಗೆ ತಲುಪಿಸುವ ದಿಸೆಯಲ್ಲಿ ಅವರು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸರಕಾರದ ಸೌಲಭ್ಯಗಳು, ರಿಯಾಯಿತಿಗಳು ಏನು ಸಿಗುತ್ತವೆ ಎಂಬ ಬಗ್ಗೆ ಜನರಿಗೆ ಮಾಹಿತಿ, ಕಲ್ಪನೆಗಳು ಇಲ್ಲ. ಆ ನಿಟ್ಟಿನಲ್ಲಿ ಯೋಜನೆಗಳನ್ನು ಜನರಿಗೆ, ಯುವ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ತಲುಪಿಸಲು ವಿನಂತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಿಠ್ಠಲ ಹಲಗೇಕರ ಅವರ ತಂದೆ- ತಾಯಿ ತೀರಾ ಬಡವರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ರಾಜಕೀಯ, ಶಿಕ್ಷಣ ಎಂದರೆ ಏನು ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಇತರರ ಮಕ್ಕಳಂತೆ ನನ್ನ ಮಗನು ಶಾಲೆಗೆ ಹೋಗಬೇಕು ಎನ್ನುವುದು ತಾಯಿಯ ಕನಸು. ಇದಕ್ಕೆ ವಿಠ್ಠಲ ಹಲಗೇಕರ ಅವರು ಅತ್ಯಂತ ಪರಿಶ್ರಮಪಟ್ಟು ಪ್ರಾಥಮಿಕ ಶಿಕ್ಷಣವನ್ನು ತೋಪಿನಕಟ್ಟಿ, ಪ್ರೌಢ ಶಿಕ್ಷಣವನ್ನು ಇದ್ದಲಹೊಂಡ, ಕಾಲೇಜು ಶಿಕ್ಷಣವನ್ನು ಬೆಳಗಾವಿಯ ಜಿಎಸ್ಎಸ್ ಹಾಗೂ ಬಿಎಡ್ ಶಿಕ್ಷಣವನ್ನು ಸಂಗೊಳ್ಳಿ ರಾಯಣ್ಣದಲ್ಲಿ ಪೂರ್ಣಗೊಳಿಸಿದರು. ಮೊದಲಿನಿಂದಲೂ ಅತ್ಯಂತ ಪ್ರತಿಭಾವಂತರಾದ ಅವರು ಆರಂಭದಲ್ಲಿ ವೇತನ ಇಲ್ಲದೇ ಶಿಕ್ಷಕರಾಗಿ ದುಡಿದರು. ಹಾಗೆಯೇ ಕೆಲವು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರದ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಕಳಕಳಿಯಿಂದ ಕೆಲಸ ಮಾಡಿ ಉತ್ತಮ ಜನಪ್ರತಿನಿಧಿ ಹಾಗೂ ಮಾದರಿ ಗ್ರಾಮ ಪಂಚಾಯಿತಿಯನ್ನು ನಿರ್ಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಅವರಂತೆ ಅವರ ಧರ್ಮಪತ್ನಿ ಸಹ ಅತ್ಯಂತ ಸರಳ ಸಜ್ಜನಿಕೆ ಹೊಂದಿದ ಗೃಹಿಣಿ. ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಪತಿಗೆ ಹೆಜ್ಜೆ ಹೆಜ್ಜೆಗೆ ಸಾಥ್ ನೀಡಿ ಅವರ ರಾಜಕೀಯ ಜೀವನಕ್ಕೆ ಹೊಸ ಸ್ಪೂರ್ತಿ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿಠ್ಠಲ ಹಲಗೇಕರ ಅವರಿಗೆ ತೀವ್ರ ಆರೋಗ್ಯ ಕಾಡಿತು. ಆ ಸಂದರ್ಭದಲ್ಲಿ ಪತಿಯ ಸೇವೆ ಮಾಡಿ ಪುನರ್ಜನ್ಮ ನೀಡಿದ್ದಾರೆ ಎನ್ನುವುದು ವಿಠ್ಠಲ ಹಲಗೇಕರ ಹಾಗೂ ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ.

ತೋಪಿನ ಕಟ್ಟಿ ಮಹಾಲಕ್ಷ್ಮೀ ಸೊಸೈಟಿ, ಖಾನಾಪುರದ ಲೈಲಾ ಶುಗರ್ಸ್, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸೇರಿದಂತೆ ಹತ್ತು ಹಲವು ಸಂಘ-ಸಂಸ್ಥೆಗಳ ಮೂಲಕ ವಿಠ್ಠಲ ಹಲಗೇಕರ ಅವರು ನೂರಾರು ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟಿದ್ದಾರೆ. ರಾಜ್ಯದಲ್ಲೇ ಹಿಂದುಳಿದಿರುವ ತಾಲೂಕು ಎಂದು ಗುರುತಿಸಲ್ಪಟ್ಟಿರುವ ಖಾನಾಪುರವನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿರುವ ಅವರು ಸದಾ ಜನರ ಜೊತೆ ನಿಕಟ ಸಂಪರ್ಕ ಹೊಂದಿ ಅವರ ಸಮಸ್ಯೆಗಳಿಗೆ ಆಶೋತ್ತರವಾಗಿ ನಿಂತಿದ್ದಾರೆ. ಅವರಲ್ಲಿಯ ಕ್ರಿಯಾಶೀಲತೆ ಹಾಗೂ ಉತ್ಸಾಹಗಳು ಇತರ ರಾಜಕಾರಣಿಗಳಿಗೆ ಅನುಕರಣೀಯವಾಗಿದೆ. ಸದ್ದಿಲ್ಲದೆ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿರುವ ಉತ್ತಮ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾರುವ ವಿಠ್ಠಲ ಹಲಗೇಕರ ಅವರನ್ನು ಶಾಸಕರನ್ನಾಗಿ ಪಡೆದಿರುವ ಖಾನಾಪುರ ಜನತೆ ಭಾಗ್ಯವಂತರೆ ಸರಿ.