ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಬೆರಕೆಯಾಗಿದ್ದ ತುಪ್ಪ ಬಳಸಿ ತಯಾರಿಸಿದ ಲಡ್ಡು ದೇವರಿಗೆ ಅರ್ಪಿಸಿದ ತಿರುಪತಿ ದೇವಸ್ಥಾನದಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಪ್ರಾಣಿಜನ್ಯ ಕೊಬ್ಬು ಇರುವ ಲಡ್ಡು ಅರ್ಪಿಸಿದ್ದನ್ನು ಖಂಡಿಸಿದ ಸಭೆ, ‘ದೇವಸ್ಥಾನವನ್ನು ಅಪವಿತ್ರಗೊಳಿಸಿದ ಮತ್ತು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಒತ್ತಾಯಿಸಿತು.
ದೇವಸ್ಥಾನಕ್ಕೆ ಅಗತ್ಯವಿರುವ ತುಪ್ಪವನ್ನು ದೇವಸ್ಥಾನ ಟ್ರಸ್ಟ್‌ ವತಿಯಿಂದಲೇ ತಯಾರಿಸಬೇಕು, ಅದಕ್ಕಾಗಿ 25 ಸಾವಿರ ದೇಸಿ ಹಸುಗಳನ್ನು ಸಾಕಲು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಮುಂದಾಗಬೇಕು, ದೇಶದ ಇತರ ದೇವಸ್ಥಾನಗಳಲ್ಲೂ ತುಪ್ಪಕ್ಕಾಗಿ ದೇಸಿ ದನಗಳ ಗೋಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಲಾಯಿತು.

ಮಂಗಳೂರು : ತಿರುಪತಿಯ ಲಡ್ಡು ಪ್ರಸಾದಕ್ಕೆ ದನದ ಕೊಬ್ಬನ್ನು ಬಳಕೆ ಮಾಡಿದ್ದಾರೆಂಬ ಅಂಶದ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಎಚ್ಚರಗೊಂಡಿದ್ದು, ಹಿಂದುಗಳ ದೇವಸ್ಥಾನಗಳನ್ನು ಹಿಂದುಗಳಿಗೇ ಬಿಟ್ಟು ಕೊಡಬೇಕು. ಕ್ರೈಸ್ತರು, ಮುಸ್ಲಿಮರಿಗೆ ಇರುವ ರೀತಿಯಲ್ಲೇ ಹಿಂದು ಧರ್ಮದ ದೇವಸ್ಥಾನಗಳು ಹಿಂದುಗಳ ಕೈಯಲ್ಲೇ ಇರಬೇಕೆಂದು ನಿರ್ಣಯ ಸ್ವೀಕರಿಸಿದೆ. ಅಲ್ಲದೆ, ತಿರುಪತಿ ಅಪವಿತ್ರ ಆಗಲು ಕಾರಣರಾದವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಹಿಂದು ಸಂತರು, ಸ್ವಾಮೀಜಿಗಳು, ವಿಶ್ವ ಹಿಂದು ಪರಿಷತ್ತಿನ ಪ್ರಮುಖರ ನೇತೃತ್ವದ ಧರ್ಮಾಗ್ರಹ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ಹಿಂದುಗಳ ದೇವಸ್ಥಾನದಿಂದ ಬರುವ ಆದಾಯವನ್ನು ಅಹಿಂದುಗಳಿಗೆ ವ್ಯಯ ಮಾಡಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತಿದ್ದು, ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳು ಹಿಂದುಗಳ ಕೈಯಲ್ಲೇ ಇದ್ದವು. ಅಲ್ಲಿನ ಆದಾಯವನ್ನು ಕೊಳ್ಳೆ ಹೊಡೆಯುವುದಕ್ಕಾಗಿ ದೇವಸ್ಥಾನಗಳನ್ನು ಸರಕಾರದ ವ್ಯಾಪ್ತಿಗೆ ತಂದಿದ್ದು ಬ್ರಿಟಿಷರು. ಅದೇ ನೀತಿಯನ್ನು ಆನಂತರದಲ್ಲಿ ಅನುಸರಿಸಿಕೊಂಡು ಬರಲಾಗಿದೆ. ಆದರೆ ಕ್ರೈಸ್ತರ ಚರ್ಚ್ ಮತ್ತು ಮುಸ್ಲಿಮರ ಮಸೀದಿಗಳಿಗೆ ಮಾತ್ರ ಈ ನೀತಿ ಅನ್ವಯವಾಗುವುದಿಲ್ಲ.

ಹಿಂದುಗಳ ದೇವಸ್ಥಾನ ಮಂಡಳಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿಸುವ ಯತ್ನ ನಡೆಯುತ್ತಿದೆ. ಚರ್ಚ್ ಮತ್ತು ಮಸೀದಿಗಳಿಗೂ ಹಿಂದುಗಳನ್ನು ಸದಸ್ಯರನ್ನಾಗಿ ಮಾಡುತ್ತೀರಾ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಧರ್ಮಾಗ್ರಹ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಪವಿತ್ರ ತುಪ್ಪ ಎನ್ನುವ ಅಪವಾದ ನಿವಾರಣೆ ಮಾಡುವ ಸಲುವಾಗಿ ಎಲ್ಲ ದೇವಸ್ಥಾನಗಳಲ್ಲಿ ತುಪ್ಪ ಹಾಲು, ನೈವೇದ್ಯ ತಯಾರಿಸುವುದಕ್ಕೆ ತಮ್ಮಲ್ಲೇ ಗೋವನ್ನು ಸಾಕಬೇಕು. ತಿರುಪತಿಯಲ್ಲಿ ಬೇಕಾದಷ್ಟು ತುಪ್ಪ ತಯಾರಿಸಲು 20 ಸಾವಿರ ದೇಸಿ ತಳಿಯ ಗೋವುಗಳನ್ನು ಸಾಕುವುದಕ್ಕೇನು ಸಮಸ್ಯೆ ದೇಶದಲ್ಲೇ ಶ್ರೀಮಂತ ದೇವಸ್ಥಾನ ಆಗಿರುವ ತಿರುಪತಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲೂ ಗೋವುಗಳನ್ನು ಸಾಕುವ ವ್ಯವಸ್ಥೆ ಆಗಬೇಕು. ಯಾವುದೇ ಕಂಪನಿಗಳಿಗೆ ಗುತ್ತಿಗೆ ಕೊಟ್ಟಿದ್ದರಿಂದ ಕಲಬೆರಕೆ ಉಂಟಾಗಿದೆ. ಇದನ್ನು ಬದಲಿಸಲು ಆಂಧ್ರ ಪ್ರದೇಶ ಸರಕಾರಕ್ಕೆ ಆಗ್ರಹ ಮಾಡುತ್ತೇವೆ ಎಂದು ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್ ಹೇಳಿದ್ದಾರೆ.

ದೇವಸ್ಥಾನದಲ್ಲಿ ದೀಪಕ್ಕೆ ಹಾಕುವ ಎಣ್ಣೆ ಇನ್ನಿತರ ಪದಾರ್ಥಗಳೆಲ್ಲ ಕಲಬೆರಕೆಯಿಂದ ಕೂಡಿದ್ದು ಎಲ್ಲವನ್ನೂ ಆಯಾ ದೇವಸ್ಥಾನದಲ್ಲೇ ಮಾಡಿದರೆ ಕಲಬೆರಕೆ ತೊಂದರೆ ಎದುರಾಗುವುದಿಲ್ಲ. ಕೆಲವು ದೇವಸ್ಥಾನಗಳಲ್ಲಿ ಗೋಗ್ರಾಸವನ್ನು ನಾಯಿಗೆ ಹಾಕುವ ಪ್ರಮೇಯಗಳಿವೆ. ಇದರ ಬದಲು ಗೋವನ್ನೇ ಸಾಕಿದರೆ, ಅದಕ್ಕೇ ಹಾಕಲು ಅವಕಾಶವಾಗುತ್ತದೆ. ಈ ರೀತಿ ಧರ್ಮ ಸಮ್ಮತವಾಗಿಯೇ ಎಲ್ಲವೂ ನಡೆಯಬೇಕು. ಸರಕಾರದ ರಾಜಕೀಯ ಹಿಡಿತ ಇದ್ದವರ ಸುಪರ್ದಿಯಿಂದಾಗಿ ದೇವಸ್ಥಾನಗಳಲ್ಲಿ ಅಪವಿತ್ರ ಆಗುವ ಸ್ಥಿತಿಯಾಗಿದೆ. ಸರಕಾರ, ರಾಜಕೀಯ ಹಿಡಿತದ ಬದಲಾಗಿ ದೇವರ ಬಗೆ ನಂಬಿಕೆಯುಳವರೇ ನಡೆಸುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.