ಮಂಗಳೂರು: ಐದು ಜಿಲ್ಲೆಗಳ ಕೇಂದ್ರಸ್ಥಳವಾಗಿರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ವಕೀಲರು ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಭವಿಷ್ಯದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಕೀಲರ ಸಂಘದಲ್ಲಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂವ್ಯಾಜ್ಯಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಇವುಗಳನ್ನು ವಿಲೇವಾರಿ ಮಾಡಬೇಕಾದರೆ ಪದೇಪದೇ ಬೆಂಗಳೂರು ಹೈಕೋರ್ಟಿಗೆ ಅಲೆಯಬೇಕಾಗಿದೆ. ಈ ತೊಂದರೆ ತಪ್ಪಿಸಲು ಹೈಕೋರ್ಟ್ ಪೀಠ ಸ್ಥಾಪನೆಯೊಂದೇ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠ ಸ್ಥಾಪನೆಗೆ ಈಗ ಈ ಭಾಗದ ವಕೀಲರು ಮತ್ತೊಮ್ಮೆ ಬಲವಾದ ಬೇಡಿಕೆ ಮಂಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದು ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ. ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯರ ಸಮಿತಿಯನ್ನು ಸಹ ರಚಿಸಲಾಗಿದೆ. ಬಹು ದಿನಗಳ ಕನಸಾಗಿರುವ ಈ ಬೇಡಿಕೆಯನ್ನು ಸರ್ಕಾರ ಮಾನ್ಯ ಮಾಡಬೇಕು. 10 ಎಕರೆ ಜಮೀನಿನಲ್ಲಿ ಸುಸಜ್ಜಿತ ಹೈಕೋರ್ಟ್ ಕಟ್ಟಡ ಸಂಕೀರ್ಣ ನಿರ್ಮಿಸಬೇಕು ಎಂದು ವಕೀಲರು ಬೇಡಿಕೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಕೀಲರು ಭಾಗವಹಿಸಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಹೋರಾಟವನ್ನು ತೀವ್ರಗೊಳಿಸಲು ಕಾರ್ಯ ಯೋಜನೆ ರೂಪಿಸುವಂತೆ ಸಂಘದ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಸಲಹೆ ನೀಡಿದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಅವರು, ಮೂಲ ಸೌಕರ್ಯ ಇರುವ ಮಂಗಳೂರು ಹೈಕೋರ್ಟ್ ಪೀಠ ಸ್ಥಾಪನೆಗೆ ಅತ್ಯಂತ ಯೋಗ್ಯ ನಗರವಾಗಿದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲತೆ ಸಿಗಲಿದೆ. ಮಂಗಳೂರು ಕೇಂದ್ರ ಕಾರಾಗೃಹ ಸ್ಥಳಾಂತರವಾಗಲಿದೆ. ಇದರಿಂದಾಗಿ ಅಲ್ಲಿನ 5 ರಿಂದ 6 ಎಕರೆ ಜಾಗ ಸಿಗಲಿದ್ದು ಹೈಕೋರ್ಟ್ ಪೀಠ ಸ್ಥಾಪನೆಗೆ ಅತ್ಯಂತ ಸೂಕ್ತವಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅತ್ಯುತ್ತಮ ಸಾರಿಗೆ ಸೌಲಭ್ಯ ಹೊಂದಿರುವುದರಿಂದ ಹೈಕೋರ್ಟ್ ಪೀಠ ಸ್ಥಾಪನೆ ಮಾಡಿ ಜನರಿಗೆ ಸುಲಭ ಸಾಧ್ಯವಾಗಿ ನ್ಯಾಯ ದೊರಕಿಸಿ ಕೊಡುವಂತಾಗಬೇಕು ಎಂದು ಅವರು ಹೇಳಿದರು.
ಮಂಗಳೂರು ನಗರ ಹೈಕೋರ್ಟ್ ಪೀಠ ಸ್ಥಾಪಿಸಲು ಸೂಕ್ತ ಪ್ರದೇಶ. ಸಕಲ ಮೂಲಸೌಕರ್ಯ ಇರುವ ನಗರ ಇದಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರವೂ ಹೌದು. ಹೆಚ್ಚಿನ ನ್ಯಾಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹಿರಿಯ ವಕೀಲರು ವಿವರಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷ ತೋನ್ಸೆ ನಾರಾಯಣ ಪೂಜಾರಿ ಅವರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.
PIL, Writ Petition ಇಲ್ಲೇ ಸಾಧ್ಯ :
ಕರ್ನಾಟಕದ ಪಶ್ಚಿಮ ಭಾಗದ ಜನರಿಗೆ ಅನುಕೂಲವಾಗುವ ಹಾಗೂ ನ್ಯಾಯದಾನದ ಪ್ರಮುಖ ಉದ್ದೇಶವಾಗಿರುವ ತ್ವರಿತ ನ್ಯಾಯ ನೀಡುವ ದಿಸೆಯಲ್ಲಿ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆ ಅತ್ಯಂತ ಸಮಯೋಚಿತವಾಗಿದೆ. ಇದು ಬಹುಕಾಲದ ಬೇಡಿಕೆ ಸಹ ಹೌದು. ನ್ಯಾಯದಾನದ ಮೂಲ ಉದ್ದೇಶ ತ್ವರಿತ ನ್ಯಾಯ ಮತ್ತು ಕಡಿಮೆ ಖರ್ಚಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಆಶಯ ಇದರಿಂದ ಈಡೇರುತ್ತದೆ. ಈ ಭಾಗದ ಜನ ಸದ್ಯ ಯಾವುದೇ ಪ್ರಕರಣವಿದ್ದರೂ ರಾಜಧಾನಿ ಬೆಂಗಳೂರಿಗೆ ಹೋಗಿ ಬರಲು ಹೆಚ್ಚಿನ ಖರ್ಚು- ವೆಚ್ಚ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಖರ್ಚು- ವೆಚ್ಚ ಸೇರಿದಂತೆ ಬೇಗನೇ ನ್ಯಾಯ ಸಿಗಬಹುದು. ರಿಟ್ ಪಿಟಿಶನ್, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಮುಂತಾದವುಗಳಿಗ ಹೆಚ್ಚಿನ ಹಣ ವ್ಯಯ ಮಾಡುವ ಸದ್ಯದ ಪರಿಸ್ಥಿತಿ ಸುಧಾರಿಸಬಹುದು . ಅಲ್ಲದೆ ಎಲ್ಲಾ ಮೂಲ ಭೂತ ಸೌಕರ್ಯ ಹೊಂದಿರುವ 5 ಜಿಲ್ಲೆಗಳ ಕೇಂದ್ರ ಸ್ಥಳ ಮಂಗಳೂರಿನಲ್ಲಿ ಉಚ್ಛ ನ್ಯಾಯಾಲಯ ಸ್ಥಾಪನೆಯಾದರೆ ಕಕ್ಷಿದಾರರ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗಬಹುದು.*ಶ್ವೇತಾ ಜೈನ್, ವಕೀಲರು, ಮೂಡುಬಿದಿರೆ