ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766 ಕುಮಟಾ-ಶಿರಸಿ ರಸ್ತೆ ಅಗಲೀಕರಣ ಕಾಮಗಾರಿಯ ಕಾರಣದಿಂದ ಡಿಸೆಂಬರ್ 2 ರಿಂದ ಫೆಬ್ರವರಿ 25ರ ವರೆಗೆ ವಾಹನ ಸಂಚಾರ ಬಂದ್ ಆಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣ ಮಾಡಬೇಕಾಗಿರುವುದರಿಂದ ಅಗಲೀಕರಣ ನಡೆದಿರುವ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕುಮಟಾದಿಂದ ಶಿರಸಿಗೆ ಹೋಗುವ ಲಘು ವಾಹನಗಳು ಕುಮಟಾ- ಬಡಾಳ- ದೊಡ್ಮನೆ- ಸಿದ್ದಾಪುರ ಮಾರ್ಗವಾಗಿ ಸಂಚರಿಸಬಹುದು. ಅಂಕೋಲಾದಿಂದ ಶಿರಸಿಗೆ ಹೋಗುವವರು ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು ಎಂದು ಸೂಚಿಸಲಾಗಿದೆ.

ಮಂಗಳೂರು-ಹೊನ್ನಾವರ ಕಡೆಯಿಂದ ಶಿರಸಿಗೆ ತೆರಳುವವರು ಹೊನ್ನಾವರ – ಸಿದ್ದಾಪುರ-ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು ಎಂದು ತಿಳಿಸಲಾಗಿದೆ.
ಆದ್ದರಿಂದ ರಾಷ್ಟ್ರೀಯ ಹೆದ್ದಾರಿ-766 (ಇ) ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಮಯದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಮೇಲ್ಕಂಡಂತೆ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋರಿದ್ದಾರೆ.