ಬೆಳಗಾವಿ : ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ವಿಳಂಬವಿಲ್ಲದೆ, ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮ ಬೆಳಗಾವಿಯಲ್ಲಿ ಭಾನುವಾರ ನಡೆಯಿತು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಂದು ಸಾವಿರಕ್ಕಿಂತ ಹೆಚ್ಚು ಜನರಿಗೆ ವಿವಿಧ ಸೌಲಭ್ಯಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಿ ವಿತರಿಸಿದರು.

ಸರಕಾರಿ ಸೌಲಭ್ಯಗಳು ಮನೆಬಾಗಿಲಿಗೆ ತಲುಪಬೇಕು. ಗ್ರಾಮೀಣ ಕ್ಷೇತ್ರದ ಜನರು ಮುಗ್ದರಿದ್ದು ಬಹಳಷ್ಟು ಜನರಿಗೆ ಸೌಲಭ್ಯ ಪಡೆಯುವುದು ಹೇಗೆಂದು ಗೊತ್ತಿಲ್ಲ. ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವುದು ನನ್ನ ಮುಖ್ಯ ಉದ್ದೇಶ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗ್ರಾಮೀಣ ಪ್ರದೇಶದ ಜನರು, ರೈತರು ಬಹಳ ಮುಗ್ದರಿರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಮಧ್ಯವರ್ತಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಮಧ್ಯವರ್ತಿಗಳ ಕಾಟ ತಪ್ಪಿಸುವ ಸಲುವಾಗಿಯೇ ಇಂಥ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ 19 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಿಸಲಾಗುತ್ತಿದೆ. ಪ್ರತಿ ವಾರ 10-15 ಜನರಿಗೆ ಸಿಎಂ ಪರಿಹಾರ ನಿಧಿ ವಿತರಿಸಲಾಗುತ್ತಿದೆ. ಸುಳೇಭಾವಿಯಲ್ಲಿ ವಿದ್ಯುತ್ ಅವಘಡದಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಇದೀಗ ತಲಾ 5 ಲಕ್ಷ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿಲಾಗಿದೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಅವರಿಗೆ ನಾನೇ ತಾಯಿಯಾಗಿ ನಿಲ್ಲುತ್ತೇನೆ ಎಂದು ಸಚಿವರು ಹೇಳಿದರು.

166 ಬಡ ಕುಟುಂಬಗಳಿಗೆ ರೇಷನ್ ಕಾರ್ಡ್ ಮಾಡಿಸಿಕೊಡಲಾಗಿದೆ. ಪಶುಸಂಗೋಪನಾ ಇಲಾಖೆ, ಕಾರ್ಮಿಕ ಇಲಾಖೆ, ಇಂಧನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ವಿರೋಧ ಪಕ್ಷದವರೂ ಏನು ಬೇಕಾದರೂ ಮಾತಾಡಲಿ, ನಾನು ಯಾವುದೇ ಜಾತಿ, ಧರ್ಮ, ಪಕ್ಷ ನೋಡದೆ, ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಇಡೀ ಕರ್ನಾಟಕಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ತಿಳಿಸಿದರು.
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಪ್ರತಿ ವರ್ಷ ನನ್ನ ಕ್ಷೇತ್ರದಿಂದ 50 ಸಾವಿರ ಜನರು ಭೇಟಿ ಕೊಡುತ್ತಿದ್ದಾರೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕ್ಷೇತ್ರದ ಪ್ರವಾಸಿಗರ ಅನುಕೂಲಕ್ಕಾಗಿ ತಂಗುದಾಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಏಕಕಾಲಕ್ಕೆ 2 ಸಾವಿರ ಜನರು ಉಲಿದುಕೊಳ್ಳಲು ವ್ಯವಸ್ಥಾ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಿದ್ದರಾಮಯ್ಯ ಕನಸು ಸಾಕಾರ: ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ
ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯ. ಇದಕ್ಕೆ ತಕ್ಕಂತೆ ಮುಖ್ಯಮಂತ್ರಿಗಳ ಆಶಯವನ್ನು ಚಾಚುತಪ್ಪದೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜಾರಿಗೆ ತರುತ್ತಿದ್ದಾರೆ. ಇದೊಂದು ಐತಿಹಾಸಿಕ ದಿನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ಸಚಿವರ ಕಾಳಜಿಯಿಂದಾಗಿ ಇಲಾಖೆಗಳ ಫಲಾನುಭವಗಳಿಗೆ ಯೋಜನೆ ಕೈಸೇರುತ್ತಿದೆ. ಪ್ರವಾಹದಿಂದ ಹದಗೆಟ್ಟಿದ್ದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ವಿವಿಧ ಇಲಾಖೆಗಳಿಂದ 100 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ರೈತ ಸಂಪರ್ಕ ಕೇಂದ್ರ, ಸಮುದಾಯ ಭವನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ಈಗಾಗಲೇ ಎರಡು ಹೆಚ್ಚುವರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಕ್ಷೇತ್ರಕ್ಕೆ ಮಂಜೂರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ. ಜೊತೆಗೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ 5 ಕೋಟಿ ರೂಪಾಯಿಯನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಂದಿರ ನಿರ್ಮಾಣ: ಪ್ರತಿ ಗ್ರಾಮಗಳಲ್ಲೂ 2 ರಿಂದ 3 ಮಂದಿರಗಳು ಈಗಾಗಲೇ ನಿರ್ಮಾಣಗೊಂಡಿದ್ದು, 5 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಭವಿಷ್ಯದ ಸೈನಿಕರಿಗೆ ತರಬೇತಿ ಸೇರಿದಂತೆ ಒಟ್ಟೂ 25 ಕೋಟಿ ರೂ. ಯೋಜನೆ ಇದಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ 22 ಕೋಟಿ ರೂಪಾಯಿ ಯೋಜನೆ ಸಿದ್ಧವಾಗಿದೆ. ನಗರಾಬಿವೃದ್ದಿ ಪ್ರಾಧಿಕಾರದಿಂದ 25 ಕೋಟಿ ರೂ. ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಬಾಲಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ಈ ವೇಳೆ ಯುವರಾಜ್ ಕದಂ, ಶಂಕರಗೌಡ ಪಾಟೀಲ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.