Join The Telegram | Join The WhatsApp |
ಸನ್ಮಾನ್ಯ ಪ್ರಧಾನ ಮಂತ್ರಿ ಮೋದಿಯವರೇ,
ಗುಜರಾತದಲ್ಲಿ ಗೆದ್ದಿದ್ದೀರಿ. ಅಭಿನಂದನೆಗಳು. ಅದು ನಿಮ್ಮ ಗೆಲುವೇ. ಹಗಲು ರಾತ್ರಿ ಶ್ರಮಪಟ್ಟಿರಿ. ಜನ ನಿಮ್ಮ ಸಲುವಾಗಿ ಮತ ಹಾಕಿದರು. ಗುಜರಾತ್ ಬಿಜೆಪಿ ಗೆದ್ದಿತು.
ಈಗ ಕರ್ನಾಟಕದ ಸರದಿ. ಇನ್ನು ಆರು ತಿಂಗಳಿಗೆ ಚುನಾವಣೆ. ಬಹುಶಃ ನಿಮಗೂ ಗೊತ್ತು , ನಮ್ಮ ರಾಜ್ಯದ ಬಿಜೆಪಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವದು ಹೆಚ್ಚಾಗಿ ನಿಮ್ಮ ಮೇಲೆ ಜನರಿಟ್ಟ ಪ್ರೀತ್ಯಭಿಮಾನಕ್ಕಾಗಿ ಹೊರತು ಇಲ್ಲಿಯ ಬಿಜೆಪಿ ನಾಯಕರು ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಹುಂಬರು , ಹೇಡಿಗಳು, ನಿಷ್ಪ್ರಯೋಜಕರು, ನಿಷ್ಕ್ರಿಯರು , ಭ್ರಷ್ಟರು ಎಲ್ಲ ಸೇರಿಕೊಂಡುಬಿಟ್ಟಿದ್ದಾರೆ. ನಿಮ್ಮ ಗಮನಕ್ಕೆ ಅದು ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅದು ವಸ್ತುಸ್ಥಿತಿ.
ಇಲ್ಲಿನ ಜನರ ಬೇಸರ ಏನೆಂದರೆ ನಿಮಗಾಗಿ ಈ ಅಯೋಗ್ಯರಿಗೆಲ್ಲ ನಾವು ಅನಿವಾರ್ಯವಾಗಿ ಮತ ಹಾಕಬೇಕಾಗಿಬಂದಿರುವದು. ಅದಕ್ಕಾಗಿ ನೀವು ನಿಮ್ಮ ಬಿಜೆಪಿ ರಾಜ್ಯ ಸರಕಾರ ಜನರಿಗೆ ಒಳ್ಳೆಯ ಆಡಳಿತ ನೀಡುವಂತೆ ಮಾಡಲು ಗಮನ ಹರಿಸಬೇಕಿತ್ತು. ಇವರು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಇವರಿಗೆ ತಕ್ಕ ಪಾಠ ಕಲಿಸಬೇಕಿತ್ತು. ಏಕೆಂದರೆ ನಾವು ಮತ ಹಾಕುವದು ನಿಮಗಾಗಿ ಹೊರತು ಇವರಿಗಾಗಿ ಅಲ್ಲ. ಇದು ಕಟುವಾಸ್ತವ. ಎಷ್ಟು ಕಾಲ ನಾವು ಇದನ್ನೆಲ್ಲ ನಿಮ್ಮ ಸಲುವಾಗಿ ಸಹಿಸಿಕೊಳ್ಳಬೇಕು? ಮೈಗಳ್ಳ ಸಚಿವರು ಶಾಸಕರುಗಳನ್ನು ಬದಲಿಸಲೂ ಅಗುವದಿಲ್ಲವಲ್ಲ ಎಂದು ಜನ ಕೇಳುತ್ತಿದ್ದಾರೆ.
ನಿಮ್ಮ ಬೊಮ್ಮಾಯಿ ಸರಕಾರ ಹೇಗೆ ಕೆಲಸ ಮಾಡುತ್ತಿದೆ ಎಂದರೆ ಕಾರ್ಪೋರೇಟರುಗಳು ಆಯ್ಕೆಯಾಗಿ ಹದಿನೈದು ತಿಂಗಳುಗಳಾದವು. ಅವರೆಲ್ಲ ಮನೆಯಲ್ಲೇ ಕುಳಿತಿದ್ದಾರೆ. ಊರು ಉದ್ಧಾರವಾಗಬೇಕೆಂದರೆ ಹೇಗೆ, ನೀವೇ ಹೇಳಿ. ಮೂರು ವರ್ಷಗಳಿಂದಲೂ ಮಂತ್ರಿಮಂಡಳ ವಿಸ್ತರಣೆ ಮಾಡಿಕೊಳ್ಳುವದೂ ಆಗುತ್ತಿಲ್ಲ. ಇವೆಲ್ಲ ಯಾರು ಮಾಡಬೇಕು? ಇದನ್ನು ಒಳ್ಳೆಯ ಆಡಳಿತ ಎಂದು ಹೇಳಲು ಸಾಧ್ಯವೇ? ನೀವೇ ಯೋಚಿಸಿ. ಉತ್ತಮ ಆಡಳಿತ ನೀಡಬೇಕೆಂಬ ಬದ್ಧತೆ ಇಲ್ಲದೇ ಇದ್ದಾಗ ಹೀಗೇ ಆಗುವದು. ಬಾಯಿ ಬಡಾಯಿ ಮಾತ್ರ ಹೆಚ್ಚಿದೆ. ಅಭಿವೃದ್ಧಿಯಲ್ಲ. ಹೀಗಾದರೆ ಹೇಗೆ ? ನಿಮ್ಮ ಸಲುವಾಗಿ, ಹಿಂದುತ್ವದ ಸಲುವಾಗಿ ಎಂದೆಲ್ಲ ಜನ ಸಹಿಸಿಕೊಳ್ಳುವದು ಎಷ್ಟು ಕಾಲ ?
ನೀವು ಇದಕ್ಕೆಲ್ಲ ಉತ್ತರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತಿಲ್ಲ. ಅದು ಅಸಾಧ್ಯ. ನಿಮ್ಮ ಜವಾಬ್ದಾರಿ ನಮಗೆ ಗೊತ್ತು. ಆದರೆ ಏನು ಮಾಡುವದು. ನಮ್ಮ ಅಳಲನ್ನು ಯಾರ ಹತ್ತಿರ ಹೇಳಿಕೊಳ್ಳುವದು. ಇಷ್ಟು ಕಾಲ ಯಾರಯಾರ ಸಲುವಾಗಿಯೋ ಜನ ಹಲ್ಲುಕಚ್ಚಿ ಸಹಿಸಿಕೊಂಡು ಬಂದಿದ್ದಾರೆ. ನಾವು ಕೇಳುವದಿಷ್ಟೇ, ಸ್ವಲ್ಪ ಕರ್ನಾಟಕದ ಬಿಜೆಪಿಯನ್ನು ಸುಧಾರಿಸುವ ಬಗ್ಗೆ ಯೋಚಿಸಿ. ಕೆಲವರು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಎಂದೂ ಮತಹಾಕುವದಿಲ್ಲ. ಅವರ ಆ ವಿಶ್ವಾಸದ ದುರುಪಯೋಗ ಮಾಡಿಕೊಳ್ಳುವದು ಬೇಡ, ಇಷ್ಟೇ ನಾವು ಕೇಳಿಕೊಳ್ಳುವದು.
– ಎಲ್. ಎಸ್. ಶಾಸ್ತ್ರಿ
Join The Telegram | Join The WhatsApp |