ಭಟ್ಕಳ : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ ಹಲವು ಆಕಾಂಕ್ಷಿತರು ತಮ್ಮ ಜೇಬಲ್ಲಿ ಟಿಕೆಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ನನ್ನ ಬಳಿ ಅಂತೂ ಟಿಕೆಟ್ ಇಲ್ಲ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿ.
ಕಾಂಗ್ರೆಸ್’ನಲ್ಲಿಯೇ ಅಭ್ಯರ್ಥಿಯಾಗಲು ಗೊಂದಲವಿದೆ. ಬಿಜೆಪಿಯಲ್ಲಿ ಪೈಪೋಟಿ ಇದೆ. ಆರು ಬಾರಿ ಸಂಸದನಾಗಿ ಆಯ್ಕೆ ಮಾಡಿದ್ದೀರಿ. ನಾನು ಅದಕ್ಕಿಂತ ಹೆಚ್ಚು ಏಕೆ ಬಯಸಲಿ. ಆಸೆಗೂ ಒಂದು ಮಿತಿ ಇದೆ. ಅನಾರೋಗ್ಯದ ಕಾರಣಕ್ಕೆ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದೆ. ಭಟ್ಕಳದಿಂದ, ಕಿತ್ತೂರಿನಿಂದ, ರಾಜ್ಯದ ಬೇರೆ ಬೇರೆ ಕಡೆಗಳಿಂದ ಕಾರ್ಯಕರ್ತರು ಬಂದು ಸಕ್ರಿಯ ರಾಜಕಾರಣದಲ್ಲಿರಲು ಒತ್ತಾಯಿಸಿದ್ದಾರೆ ಎಂದು ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.
ಅವರು ಭಟ್ಕಳ ಬಿಜೆಪಿ ಮಂಡಲ ವತಿಯಿಂದ ನಡೆದ ಬೆಳಕೆ ಮಹಾಶಕ್ತಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶ ಉಳಿಯಬೇಕು ಅಂತಾದರೆ ಬಿಜೆಪಿಗೆ ವೋಟ್ ಹಾಕಲೇಬೇಕು. ಮೋದಿ ಮತ್ತೊಮ್ಮೆ ಎಂಬ ನಾಮಧ್ಯೇಯದಿಂದ ದೇಶದ ರಕ್ಷಣೆಗಾಗಿ ಬಿಜೆಪಿ ಗೆಲ್ಲಿಸಬೇಕು. ಮೋದಿಯನ್ನು ಪ್ರಧಾನಿ ಮಾಡಬೇಕು ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದರು.
ಒಂದು ಪಕ್ಷದ ಅಭಿವೃದ್ಧಿಯನ್ನು ನೋಡಬೇಕಾದರೆ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಪ್ರಣಾಳಿಕೆಯ ನಾವು ಅರಿಯಬೇಕಾಗಿದೆ. ಚುನಾವಣೆ ನಂತರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ನೀಡಿದ ಪ್ರಣಾಳಿಕೆ ಮತ್ತು ಅಭಿವೃದ್ಧಿ ಕಾರ್ಯಗಳ ತುಲನೆ ಮಾಡಿ ನೋಡಿದಾಗ ಮಾತ್ರ ನಮಗೆ ಅಭಿವೃದ್ಧಿಯ ಬಗ್ಗೆ ತಿಳಿಯುತ್ತದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯ ಯೋಜನೆ ನೀಡಿದೆ. ಇದರಿಂದ ಸರ್ಕಾರ ದಿವಾಳಿಯಾಗಿದೆ. ಆದರೂ ಸಹ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ, ನಾವು ಹೆಣ್ಣು ಮಕ್ಕಳನ್ನು ಫ್ರೀಯಾಗಿ ಬಸ್ ನಲ್ಲಿ ಕಳಿಸಿದ್ದೇವೆ ಎಂದು ಹೇಳುವ ಅವರ ಈ ಭಾಗ್ಯದಿಂದ ಸರ್ಕಾರ ದಿವಾಳಿಯಾಗಿದೆ ಎಂದು ಟೀಸಿದರು.
ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳನ್ನು ಮಾಡಲು ಹಣವಿಲ್ಲ. ಎಂಎಲ್ಎಗಳಿಗೆ ಅನುದಾನ ನೀಡಲು ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ, ಗುತ್ತಿಗೆದಾರರಿಗೆ ಗುತ್ತಿಗೆದಾರರು ಹಾಕಿದ ಹಣವನ್ನು ನೀಡಲು ಸರ್ಕಾರದಲ್ಲಿ ಹಣವಿಲ್ಲ. ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ, ಮುಂದಿನ ಲೋಕಸಭೆ ಎಲೆಕ್ಷನ್ ಮುಗಿಯುವ ತನಕ ಮಾತ್ರ. ನಂತರ ಗ್ಯಾರಂಟಿ ಯೋಜನೆ ಇರುವುದಿಲ್ಲ. ಸರ್ಕಾರ ಇರುವುದೂ ಅನುಮಾನ ಎಂದರು.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಿಂದ ನಾವು ಅಧಿಕಾರವನ್ನು ಕಳೆದುಕೊಂಡಿದ್ದೇವೆ. ಅದಕ್ಕಾಗಿ ನಾವು ನಮ್ಮಿಂದ ಬಿಟ್ಟು ಹೋದವರನ್ನು ಸಂಪರ್ಕಿಸಿ ಅವರಿಗೆ ನಮ್ಮೊಂದಿಗೆ ಬರಲು ತಿಳಿಸಿ ಅವರನ್ನು ಕರೆದುಕೊಂಡು ಬರುವಂತಹ ಕೆಲಸ ಆಗಬೇಕು. ಬಿಜೆಪಿ ಪಕ್ಷ ಗೆಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮಾಜಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಸುರೇಶ ನಾಯ್ಕ ಕೋಣೆಮನೆ, ಶ್ರೀಕಾಂತ ನಾಯ್ಕ, ದೀಪಕ ನಾಯ್ಕ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಇದ್ದರು.