ಸಿವಿಲ್ ಜಡ್ಜ್ ಪರೀಕ್ಷೆ 25 ವರ್ಷಕ್ಕೆ ಪಾಸ್ ಮಾಡಿದ ಮಂಗಳೂರು ಎಸ್ ಡಿಎಂನಲ್ಲಿ ಬಿಬಿಎ, ಎಲ್ ಎಲ್ ಬಿ ಓದಿದ್ದ ಅನಿಲ್ ಜಾನ್ ಸಿಕ್ವೆರಾ ಜಡ್ಜ್  ಹುದ್ದೆಗೇರಿದ ರಾಜ್ಯದ ಅತ್ಯಂತ ಕಿರಿಯ ಸಾಧಕರಾಗಿ ಹೊರಹೊಮ್ಮಿದ್ದಾರೆ. ಕೃಷಿಕರಾದ ಎವರೆಸ್ಟ್ ಸಿಕ್ವೇರಾ ಮತ್ತು ಐವಿ ಸಿಕ್ವೇರಾ ದಂಪತಿಯ ಮೂವರು ಮಕ್ಕಳಲ್ಲಿ ಕಿರಿಯ ಮಗ ಅನಿಲ್ ಚಿಕ್ಕಂದಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದರು. ಅನಿಲ್‌ ಜಾನ್‌ ಸಿಕ್ವೇರಾರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಮಂಗಳೂರಿನ ನ್ಯಾಯವಾದಿ ದೀಪಕ್‌ ಡಿಸೋಜ ಸಂತಸ ವ್ಯಕ್ತಪಡಿಸಿದ್ದಾರೆ. ದೀಪಕ್‌ ಡಿಸೋಜರ ಬಳಿಯೇ ಮಂಗಳೂರಿನಲ್ಲಿ ಅನಿಲ್‌ ತರಬೇತಿ ಪಡೆಯುತ್ತಿದ್ದರು. ಮಂಗಳೂರು ಬಾರ್‌ ಅಸೋಸಿಯೇಶನ್‌ನ ಸದಸ್ಯರೂ ಆಗಿದ್ದ ಅನಿಲ್‌ ಶಾಲಾ ದಿನದಲ್ಲೇ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದರು. ಪ್ರೌಢ ಶಿಕ್ಷಣದಲ್ಲಿ ಇದ್ದಾಗಲೇ ಪೀಪಲ್ ಲೀಡರ್ ಆಗಿದ್ದರು. ಕಾಲೇಜಿನಲ್ಲೂ ವಿದ್ಯಾರ್ಥಿ ನಾಯಕರಾಗಿ ಸೇವೆ ಸಲ್ಲಿಸಿದ್ದ ಅನಿಲ್ ವಿವಿಧ ಸಮಿತಿಗಳ ಪ್ರಮುಖ ಸದಸ್ಯರಾಗಿ ಮಂಗಳೂರಿನಲ್ಲಿ ಗುರುತಿಸಿಕೊಂಡಿದ್ದರು. 2022ರ ಜುಲೈ 25 ರಂದು ಮಂಗಳೂರಿನ ಧರ್ಮಪ್ರಾಂತ್ಯದ ಇಂಡಿಯನ್‌ ಕ್ಯಾಥೋಲಿಕ್ ಯೂತ್‌ ಮೂವ್‌ಮೆಂಟ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರು :
ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ 25 ರ ಹರೆಯದ ಯುವಕ ಅನಿಲ್‌ ಜಾನ್ ಸಿಕ್ವೆರಾ 2023 ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಪಾಸ್ ಮಾಡಿದ್ದು, ಆ ಮೂಲಕ ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್ ಬಿ ಪೂರೈಸಿದ್ದ ಅನಿಲ್‌ ಜಾನ್ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು.

ಕಾನೂನು ಪದವಿಯ ಬಳಿಕ ಮಂಗಳೂರಿನಲ್ಲಿ ಬಾ‌ರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ಜೊತೆಗೆ ವೃತ್ತಿ ನಡೆಸುತ್ತಿದ್ದರು. ಕಾಲೇಜು ದಿನಗಳಲ್ಲೇ ನಾಯಕತ್ವ ಬೆಳೆಸಿಕೊಂಡಿದ್ದ అనిಲ್ ಸಿಕ್ಕೇರಾ 2022 ರಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆಯ ಅಧ್ಯಕ್ಷರಾಗಿದ್ದರು. ಅನಿಲ್ ಸಿಕ್ವೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಇಂಟರ್ವ್ಯೂ ಪಾಸ್ ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.