ಬೆಳಗಾವಿ: ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಅವರು ಬ್ರಿಗೇಡಿಯರ್ ಜೈದೀಪ ಮುಖರ್ಜಿ ಅವರನ್ನು ಭೇಟಿಯಾಗಿ ನೌಗೋಬಾ (ರೇಣುಕಾದೇವಿ) ಯಾತ್ರೆಯ ಜಾಗದ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಅನಿಲ್ ಬೆನಕೆ ಮಾತನಾಡಿ, ಕಳೆದ ಎರಡು-ಮೂರು ವರ್ಷಗಳಿಂದ ನೌಗೋಬಾ ಯಾತ್ರೆ (ರೇಣುಕಾದೇವಿ ಜಾತ್ರಾ) ಮಹೋತ್ಸವ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಂಡು ನೌಗೋಬಾ ಯಾತ್ರೆಗೆ ಜಾಗ ದೊರೆತಿದ್ದು ಈ ನಿಟ್ಟಿನಲ್ಲಿ ತಾವು ಜಾಗ ಪರಿಶೀಲನೆ ಮಾಡುವಂತೆ ಅವರು ವಿನಂತಿಸಿದರು. ನೂರಾರು ವರ್ಷಗಳಿಂದ ಯಲ್ಲಮ್ಮ ದೇವಿ ಜಾತ್ರೆಯ ಸಂದರ್ಭದಲ್ಲಿ ಬೆಳಗಾವಿಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪಲ್ಲಕಿ ಹಾಗೂ ಹಿಂದೂ ಧಾರ್ಮಿಕ ಪರಂಪರೆ ಪ್ರಕಾರ ಜಾತ್ರೆ ನಡೆಯುತ್ತಾ ಬಂದಿದೆ. ರಕ್ಷಣಾ ಇಲಾಖೆ ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳ ಸಹಕಾರದೊಂದಿಗೆ ಇದೀಗ ಜಾತ್ರೆಗೆ ಜಾಗ ದೊರೆತಿದ್ದು ಬೆಳಗಾವಿಯಲ್ಲಿ ಸಂತಸ ಮೂಡಿದೆ. ಬೆಳಗಾವಿ ಜನರು ಒಗ್ಗಟ್ಟಾಗಿ ಪರಂಪರೆ ಹಾಗೂ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ಅನಿಲ ಬೆನಕೆ ತಿಳಿಸಿದರು.
ಬ್ರಿಗೇಡಿಯರ್ ಅವರು ಈ ಬಗ್ಗೆ ಜಾಗದ ಕಾಮಗಾರಿ, ಸೌಂದರ್ಯೀಕರಣಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿಯಿಂದ ಸಹಕರಿಸುವುದಾಗಿ ತಿಳಿಸಿದರು.
ನಗರ ದೇವಸ್ಥಾನ ಮಂಡಲ ಅಧ್ಯಕ್ಷ ರಣಜಿತ್ ಚೌಹಾಣ್ ಪಾಟೀಲ, ಕಾರ್ಯದರ್ಶಿ ಪರಶುರಾಮ ಮಾಳಿ ಮತ್ತು ವಿಜಯ ತಂಬುಚೆ ಉಪಸ್ಥಿತರಿದ್ದರು.